

ವಿಜಯಪುರ: ಬಸವಾದಿ ಪ್ರಥಮರಂತೆ ಸಮಾಜಕ್ಕೆ ಒಳಿತನ್ನು ಹಾಗೂ ಇಡೀ ಮಾನವ ಕುಲಕ್ಕೆ ಪರೋಪಕಾರಿ, ತ್ಯಾಗಜೀವಿ ಮತ್ತು ನಿರಾಭಾರಿಯಾಗಿ ಭರತ ಖಂಡದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಮಹಾನ ಚೇತನರಲ್ಲಿ ಲಿಂ. ಸಿದ್ಧೇಶ್ವರ ಶ್ರೀಗಳು ಒಬ್ಬರಾಗಿದ್ದಾರೆ ಎಂದು ಹೈದರಾಬಾದಿನ ನಿವೃತ್ತ ಪ್ರಾಧ್ಯಾಪಕ ಡಾ. ವೃಷಭ ದೇವ ಶರ್ಮಾ ಹೇಳಿದರು.
ನಗರದ ಕೆಪಿಎಂಇ ಸಂಸ್ಥೆಯ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಯವರ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳ ಪ್ರವಚನಗಳು ಇಂದು ಭಾರತದ ಹಲವು ಭಾಷೆಗಳಲ್ಲಿ ಅನುವಾದವಾಗಿವೆ ಎಂದು ತಿಳಿಸಿದರು.
ಸಿದ್ಧೇಶ್ವರ ಶ್ರೀಗಳ ವ್ಯಕ್ತಿತ್ವವನ್ನು ಪರಿಚಯಿಸಲು ಬ್ರಹ್ಮಾಂಡದಷ್ಟೇ ಸಂಕಿರಣವಾದದ್ದು. ಎಲ್ಲರೂ ಧರ್ಮ, ಪರೋಪಕಾರ, ಮಾನವೀಯ ಮೌಲ್ಯ, ಪ್ರೀತಿ ಹಾಗೂ ಸತ್ಯ ಮಕ್ಕಳ ತಲೆಯಲ್ಲಿ ಹೇಗೆ ಬಿತ್ತಬೇಕು ಎಂಬುದರ ಬಗ್ಗೆ ಸಿದ್ಧೇಶ್ವರ ಶ್ರೀಗಳ ಪ್ರವಚನಗಳು ಸರ್ವಕಾಲಿಕ ಸತ್ಯವಾಗಿವೆ ಎಂದರು.
ಮುಖ್ಯ ಅತಿಥಿ ಧಾರವಾಡ ಜೆಎಸ್‌ಎಸ್ ಪ.ಪೂ. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಗೋವಿಂದರಾಜ ತಳಕೋಡ ಮಾತನಾಡಿ, ಸಿದ್ಧೇಶ್ವರ ಸ್ವಾಮಿಗಳ ವಿಚಾರ ಸಾಗರದಷ್ಟು ವಿಶಾಲ, ಆಕಾಶದಷ್ಟು ವಿಸ್ತಾರವಾದದ್ದು. ಅಂತಹ ಮಹನೀಯರ ಸಮಕಾಲೀನರಾಗಿ ಜನಿಸಿದ ನಾವುಗಳೇ ಧನ್ಯರು ಎಂದು ತಿಳಿಸಿದರು.
ಡಾ. ಎಸ್.ಟಿ. ಮೇರವಾಡೆ ಹಾಗೂ ಡಾ. ಆರ್.ವಿ. ಪಾಟೀಲ ಸಂಪಾದಿಸಿದ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಯವರ ಜೀವನ-ಸಾಹಿತ್ಯ-ತತ್ವದರ್ಶನ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.
ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಎನ್.ಎಂ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿರೇಶ ವಾಲಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಎಸ್.ಟಿ. ಮೇರವಾಡೆ ಸ್ವಾಗತಿಸಿದರು. ಡಾ. ಎಸ್.ಜೆ. ಜಹಾಗೀರದಾರ ಪರಿಚಯಿಸಿದರು. ಪ್ರೊ. ಜಿ.ಎಸ್. ಬಗಲಿ ವಂದಿಸಿದರು. ನಂತರ ಸಿದ್ಧೇಶ್ವರ ಶ್ರೀಗಳ ಕುರಿತ ಗೋಷ್ಠಿಗಳು ನಡೆದವು.