

ಕುಮಟಾ: ಗುರು ಕೇವಲ ವ್ಯಕ್ತಿಯಲ್ಲ, ಶಕ್ತಿ. ಗುರು ತತ್ವವು ಮಾರ್ಗದರ್ಶನದ ಜತೆಗೆ ಅಂತಸ್ಥ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಿ.ಎನ್. ಭಟ್ಟ ಹೇಳಿದರು.
ಬಗ್ಗೋಣದಲ್ಲಿ ಸಾಧನಾ ಸಂಗೀತ ವಿದ್ಯಾಲಯದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ, ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಹಾಗೂ ಬಾಲಚಂದ್ರ ಹೆಗಡೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗುರುವನ್ನು ನಂಬುವ ಶಿಷ್ಯನಿಗೆ ಎಂದಿಗೂ ಸೋಲಿಲ್ಲ. ಸಂಗೀತ ಕ್ಷೇತ್ರದಲ್ಲಿ ಕಳೆದ ಹದಿನೇಳು ವರ್ಷಗಳಿಂದ ನಿರಂತರ ಸಾಧನೆ ಮಾಡುತ್ತಿರುವ ಲಕ್ಷ್ಮೀ ಹೆಗಡೆ ಅವರ ಕಾರ್ಯ ಬಹುದೊಡ್ಡದು. ಸಾಧನಾ ಸಂಗೀತ ವಿದ್ಯಾಲಯದ ಮೂಲಕ ಸುಸಂಸ್ಕೃತ ಸಮಾಜ ನಿರ್ವಣದ ಕಾರ್ಯ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂಥದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಗೀತಗಾರ ತಿಮ್ಮಣ್ಣ ಹೆಗಡೆ ಮಾತನಾಡಿ, ಬದುಕಿನಲ್ಲಿ ನಿತ್ಯವೂ ಸಂಗೀತವಿದೆ. ಮಾತಿನಲ್ಲೂ ಸಂಗೀತವಿದೆ. ಆದರೆ, ಸಂಗೀತವನ್ನೇ ಜೀವನವಾಗಿಸಿಕೊಂಡವರು ಸಾಧಕರಾಗಿ ನಮ್ಮ ಮುಂದಿದ್ದಾರೆ ಎಂದರು.
ದೀಪಿಕಾ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಎನ್.ಜಿ. ಹೆಗಡೆ ಕಪ್ಪೆಕೆರೆ, ಸಮರ್ಥ ಹೆಗಡೆ, ಡಾ.ಸತೀಶ ಭಟ್ಟ, ಮನೋಜ ಭಟ್ಟ ಇದ್ದರು. ಹರ್ಷಾ ಭಟ್ಟ ಸ್ವಾಗತಿಸಿದರು. ನಂದನ ಹೆಗಡೆ, ಅನನ್ಯಾ ಭಟ್ಟ ನಿರೂಪಿಸಿದರು. ಪುರಬ್ ನಾಯ್ಕ ವಂದಿಸಿದರು.