ಮೌಲ್ಯಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ

16 krp 01
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕಿಹೆಬ್ಬಾಳು ನೂತನ ಸೇವಾ ಕೇಂದ್ರವನ್ನು ಶಾಸಕ ಎಚ್.ಟಿ.ಮಂಜು ಉಧ್ಘಾಟಿಸಿ ಮಾತನಾಡಿದರು. ರಘು, ಹರೀಶ್, ಎ.ಜೆ.ಶಂಕರ್, ಬಿ.ಕೆ.ಶಿವಲೀಲಾ, ರಾಧಾ, ಕವಿತಾ, ರಂಗನಾಥ್ ಇದ್ದರು.
Published on

ಕೆ.ಆರ್.ಪೇಟೆ: ಪುರಾತನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಬೆಳೆದುಬಂದಿದ್ದ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಸೇವಾ ಕೇಂದ್ರ ಶಾಖೆಯನ್ನು ಸೋಮವಾರ ಉಧ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮೌಲ್ಯಗಳು, ನೈತಿಕತೆ, ಸಂಪ್ರದಾಯಗಳು, ಸಂಸ್ಕೃತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕೌಟುಂಬಿಕ ವ್ಯವಸ್ಥೆಯಲ್ಲಿದ್ದ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ದೇವರಲ್ಲಿ ಭಕ್ತಿ, ಪುರಾತನ ಕಾಲದ ಸಂಪ್ರದಾಯಗಳ ಆಚರಣೆ, ಗುರುಹಿರಿಯರಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆ ಇದು ಹೀಗೆಯೇ ಮುಂದುವರಿದರೆ ಸಮಾಜದಲ್ಲಿ ಅಶಾಂತಿ, ಅರಾಜಕತೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ನಮ್ಮಿಂದಲೇ ಬದಲಾವಣೆ ಎಂಬ ತತ್ವಕ್ಕೆ ಅನುಗುಣವಾಗಿ ತಾವಾಗಿಯೇ ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಸಮಾಜ ಸೇವಕ ಹಾಗೂ ಪ್ರಥಮದರ್ಜೆ ಗುತ್ತಿಗೆದಾರ ಅಕ್ಕಿಹೆಬ್ಬಾಳು ರಘು ಮಾತನಾಡಿ, ಬ್ರಹ್ಮಕುಮಾರಿ ಪ್ರಜಾಪಿತ ವಿಶ್ವವಿದ್ಯಾಲಯಕ್ಕೆ ವಿಶ್ವಸಂಸ್ಥೆ ಪ್ರಪಂಚದಲ್ಲಿ ಯಾವ ವಿಶ್ವವಿದ್ಯಾಲಯಕ್ಕೂ ಸಿಗದ ಏಳು ಶಾಂತಿ ಪ್ರಶಸ್ತಿಗಳು ಲಭಿಸಿವೆ. ಮೂವರು ಸ್ತ್ರೀಯರು ಈ ಕೇಂದ್ರದ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂದಿನ ಯುವಕರು ಈ ದೇಶದ ಶಕ್ತಿ. ಅವರು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ರಾಮರಾಜ್ಯವನ್ನು ಸ್ಥಾಪಿಸಲು ಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಮಾತನಾಡಿ, ಮಾನವನ ವೈಯಕ್ತಿಕ ಜೀವನದಲ್ಲಿ ದಿನಕಳೆದಂತೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಸಂಸ್ಕೃತಿ, ಆಚಾರ, ವಿಚಾರ, ನಡೆ, ನುಡಿ ಮುಂತಾದುವು ಅಧೋಗತಿಗೆ ತೆರಳುತ್ತಿವೆ. ಬಸವಣ್ಣ ಅವರು ಹೇಳಿದಂತೆ ನೀವುಗಳು ಮೊದಲು ನಿಮ್ಮ ಮನವ ಸಂತೈಸಿಕೊಳ್ಳಿ ಎಂಬಂತೆ ನೀವು ಮೊದಲು ಬದಲಾದರೆ ಪ್ರಪಂಚ ಬದಲಾಗುತ್ತದೆ. ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ನಿವೃತ್ತ ಇಇ ಎ.ಜೆ.ಶಂಕರ್, ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ.ಶಿವಲೀಲಾ, ರಾಧಾ, ಕವಿತಾ, ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net