

ಅರಕಲಗೂಡು : ತೀವ್ರ ಹದಗೆಟ್ಟು ಹೋಗಿರುವ ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಗೆ ತೆರಳುವ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಾಸನ-ಪಿರಿಯಾಪಟ್ಟಣ ಮಾರ್ಗದಿಂದ ತಂಬಾಕು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಅರ್ಧ ಕಿ.ಮೀ. ಉದ್ದದ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿ ಭಾಗ್ಯ ಕಾಣದೆ ಹಾಳಾಗಿ ಹೋಗಿದೆ. ಕಲ್ಲುಮಣ್ಣಿನಿಂದ ಕೂಡಿರುವ ರಸ್ತೆ ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ಒಂದು ಕಡೆ ಕಲ್ಲು ಮಣ್ಣಿನಿಂದ ಕೂಡಿರುವ ಕಚ್ಚಾ ರಸ್ತೆ ಕಿಷ್ಕಿಂಧೆಯಾಗಿದ್ದು ಎರಡು ವಾಹನಗಳು ಎದುರು ಬದುರಾದರೆ ಓಡಾಡಲು ಕಷ್ಟಕರವಾಗಿದೆ.
ಈ ರಸ್ತೆಯಲ್ಲಿ ರೈತರ ವಾಹನಗಳಲ್ಲಿ ತಂಬಾಕು ಬೇಲ್‌ಗಳನ್ನು ತುಂಬಿಕೊಂಡು ಸಾಗುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ನೀಡುತ್ತಿರುವ ರಸಗೊಬ್ಬರ ಸಾಗಿಸುತ್ತಿದ್ದು ಮಳೆಗಾಲದ ಹದಗೆಟ್ಟ ರಸ್ತೆ ಮೇಲಿನ ಸಂಚಾರದಿಂದ ರೋಸಿ ಹೋಗುವಂತಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಿಂದ ರಸಗೊಬ್ಬರದ ಚೀಲಗಳನ್ನು ತುಂಬಿಕೊಂಡು ಮಾರುಕಟ್ಟೆಗೆ ಸಾಗುತ್ತಿದ್ದ ಲಾರಿ ಹೂತು ಹೋಗಿ ಚಾಲಕನ ಸ್ಥಿತಿ ಫಜೀತಿಯಾಗಿತ್ತು. ಲಾರಿ ಮಗುಚಿ ಬೀಳುವ ಅಪಾಯ ಎದುರಾಗಿತ್ತು. ಚಾಲಕನ ಸಮಯಪ್ರಜ್ಞೆಯಿಂದ ಚಕ್ರಗಳು ಹೂತ್ತಿದ್ದ ಲಾರಿ ನಿಲ್ಲಿಸಿ ರಸಗೊಬ್ಬರದ ಚೀಲಗಳನ್ನು ತೆಗೆದು ಲಾರಿ ಮುಂದೆ ಸಾಗಿಸಲಾಯಿತು. ಪ್ರತಿನಿತ್ಯ ಸಂಚರಿಸುತ್ತಿರುವ ರೈತರ ವಾಹನಗಳು, ಟ್ರ್ಯಾಕ್ಟರ್, ಎತ್ತಿನ ಬಂಡಿಗಳು ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಿ ರೈತರ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ.