

ಚಿಕ್ಕನಾಯಕನಹಳ್ಳಿ: ಪಡಿತರ ಅಕ್ಕಿ ತೂಕದಲ್ಲಾಗುತ್ತಿರುವ ವ್ಯತ್ಯಾಸ...ಕರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಸೋಂಕಿನ ಆತಂಕ...ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಸೇರಿ ಇನ್ನಿತರ ವಿಷಯಗಳು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಒಳಗಾಗಿದ್ದವು.
ಪ್ರತಿತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ದಾಸ್ತಾನು ಉಗ್ರಾಣದಿಂದ ಸರಬರಾಜಾಗುವ ಪಡಿತರ ಅಕ್ಕಿಯು ದಾಖಲೆಯಲ್ಲಿ ಒಂದು ಇದ್ದರೆ, ವಾಸ್ತವವಾಗಿ ಒಂದು ಅಳತೆ ಇರುತ್ತದೆ, ಇದರಿಂದ 50 ಕೆ.ಜಿ.ಯ ಚೀಲದಲ್ಲಿ ಎರಡರಿಂದ ಐದು ಕೆಜಿವರೆಗೆ ತೂಕ ಕಡಿಮೆಯಾಗುತ್ತದೆ ಎಂದು ತಾಪಂ ಸದಸ್ಯ ಸಿಂಗದಹಳ್ಳಿ ರಾಜ್‌ಕುಮಾರ್ ಬೇಸರಿಸಿದರು. ವೇರ್‌ಹೌಸ್‌ನಲ್ಲಿ ತೂಕಮಾಡಿಸಿ ಒಂದು ಚೀಲವನ್ನು 50 ಕೆ.ಜಿ. 52 ಕೆ.ಜಿ. ಎಂದು ದಾಖಲೆಯಲ್ಲಿ ನಮೂದಿಸಿರುತ್ತಾರೆ, ಅದರಲ್ಲಿ ಚೀಲಗಳನ್ನು ಪ್ರತ್ಯೇಕವಾಗಿ ತೂಕಮಾಡಿದರೆ ಕಡಿಮೆ ಬರುತ್ತದೆ, ಆಹಾರ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿದ ಆಹಾರ ನಿರೀಕ್ಷಕ ಕಿರಣ್‌ಕುಮಾರ್ ಪಡಿತರ ವಿತರಣೆಯಲ್ಲಿ ಬಂದಿರುವ ದೂರುಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಆನೆಕಾಲು ರೋಗ: ಕೋವಿಡ್ ಬಗ್ಗೆ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ತಿಳಿಸಿದ ತಾಪಂ ಅಧ್ಯಕ್ಷೆ ಚೇತನಾ ಗಂಗಾಧರ್, ದಸೂಡಿ ಭಾಗದಲ್ಲಿ ಆನೆಕಾಲು ರೋಗ ಕಾಣಿಸಿಕೊಳ್ಳುತ್ತಿದ್ದು, ಕ್ರಮಕೈಗೊಳ್ಳುವಂತೆ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಆಲದಕಟ್ಟೆ ತಿಮ್ಮಯ್ಯ, ಕರೊನಾ ವ್ಯಾಪಕವಾಗಿದ್ದು, ಯಾವುದೇ ಇಲಾಖೆಗಳು ಹಾಗೂ ಬ್ಯಾಂಕ್‌ಗಳಲ್ಲಿ ಸರಿಯಾದ ಕ್ರಮಕೈಗೊಂಡಿಲ್ಲ. ಸ್ಯಾನಿಟೈಸರ್, ಥರ್ಮಲ್‌ಸ್ಕ್ಯಾನಿಂಗ್ ಸೇರಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಬೇರೆಡೆಗೆ ಹೋಗುವಂತೆ ಹೇಳುತ್ತಿದ್ದಾರೆ ಎಂದರು.
ಇಒ ಅಥಿಕ್‌ಪಾಷ ಮಾತನಾಡಿ, ಕರೊನಾ ಜಾಗೃತಿ ಮೂಡಿಸುತ್ತಿದ್ದು, ಸೀಲ್‌ಡೌನ್ ಆದ ಗೋಡೆಕೆರೆಗೊಲ್ಲರಹಟ್ಟಿಯಲ್ಲಿ ಅಗತ್ಯ ದಿನಸಿ ವಿತರಿಸಲಾಗಿದೆ ಎಂದರು. ಸದಸ್ಯೆ ಶೈಲಾ ಶಶಿಧರ್ ಮಾತನಾಡಿ, ಶಿಕ್ಷಕರು ಪಾಲಕರ ಒಪ್ಪಿಗೆ ಇಲ್ಲದೇ ಮಕ್ಕಳ ವರ್ಗಾವಣೆ ಪತ್ರ ನೀಡಬಾರದು ಹಾಗೂ ಶಿಕ್ಷಣ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ನೀಡಿ ಆಂದೋಲನ ಮಾಡಬೇಕು ಎಂದರು. ಸಿಂಗದಹಳ್ಳಿ ರಾಜ್‌ಕುಮಾರ್ ಮಾತನಾಡಿ, ಶಾಲಾ ಆಸ್ತಿಗಳನ್ನು ಗುರುತಿಸಲಾಗಿದ್ದು, ಅದನ್ನು ಸಂಬಂಧಪಟ್ಟ ಶಾಲೆಯ ಹೆಸರಿಗೆ ದಾಖಲೆ ಮಾಡಿ ಪಹಣಿ ಬರುವಂತೆ ಮಾಡಲು ಕಂದಾಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು.
ತಾಪಂ ಉಪಾಧ್ಯಕ್ಷ ಯತೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ, ತಹಸೀಲ್ದಾರ್ ತೇಜಸ್ವಿನಿ, ತಾಪಂ ಸದಸ್ಯರಾದ ಕೇಶವಮೂರ್ತಿ, ಪ್ರಸನ್ನಕುಮಾರ್, ಇಂದಿರಾಕುಮಾರಿ ಇದ್ದರು.