ಬಿಜೆಪಿ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ,  ಉದ್ದೇಶಿತ ಯೋಜನೆ ಕೈಬಿಡುವಂತೆ ಆಗ್ರಹಿಸಿ ರೈತರು, ಸ್ವಾಮೀಜಿ, ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

4dbp1(FarmerProtest)
Published on

ದೊಡ್ಡಬಳ್ಳಾಪುರ: ಯಾವುದೇ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕಾದರೆ ಆ ಭಾಗದ ಶೇ.80 ರೈತರ ಒಪ್ಪಿಗೆ ಪಡೆದು ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬ ಆದೇಶವಿದ್ದರೂ ಸರ್ಕಾರ, ಸ್ಥಳೀಯ ರೈತರು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಿರುವುದು ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಆರೋಪಿಸಿದರು.

ಮಲ್ಟಿ ಲಾಜಿಸ್ಟಿಕ್ ಪಾರ್ಕ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ದೊಡ್ಡಬೆಳವಂಗಲ ಹೋಬಳಿಯ ಹುಲುಕುಂಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೈಗಾರಿಕಾ ಮಂತ್ರಿಯೊಂದಿಗೆ ಸಭೆ ಆಯೋಜಿಸಬೇಕು. ಕೃಷಿ ಭೂಮಿಯಲ್ಲಿ ಕೈಗಾರಿಕಾ ಸ್ಥಾಪನೆ ನಿರ್ಧಾರ ಕೈ ಬಿಟ್ಟು ಸರ್ಕಾರದ ಖಾಲಿ ಜಾಗ ಬಳಕೆ ಮಾಡಿಕೊಂಡರೆ ಆಕ್ಷೇಪವಿಲ್ಲ. ಕೃಷಿ ಭೂಮಿಯಲ್ಲಿ ಕೈಗಾರಿಕಾ ಸ್ಥಾಪನೆ ನಿರ್ಧಾರ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಅನೇಕ ಮಠಗಳ ಶ್ರೀಗಳು, ಸಂಸದರು, ಶಾಸಕರು ಹಾಗೂ ರೈತರ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತರಿಂದಲೇ ದೇಶ ಸುಭಿಕ್ಷವಾಗಿರುವುದು. ಸರ್ಕಾರಗಳು, ಅಧಿಕಾರಿಗಳು ಏಕಾಮುಖವಾಗಿ ನಿರ್ಧಾರ ತೆಗೆದುಕೊಂಡು ಜಮೀನು ಕಸಿದುಕೊಂಡರೆ ರೈತರು ಹಾಗೂ ಅವರ ಮುಂದಿನ ಪೀಳಿಗೆ ಹೇಗೆ ಜೀವನ ನೆಡಸಬೇಕು. ಅನೇಕ ಕಡೆಗಳಲ್ಲಿ ನೀರಿಲ್ಲದ ಬರುಡು ಭೂಮಿ ಸಾಕಷ್ಟಿದೆ ಅದನ್ನು ಬಿಟ್ಟು ಇಲ್ಲಿನ ಭೂ ಪ್ರದೇಶ ಸಮೃದ್ಧವಾಗಿದೆ. ಕೃಷಿಗೆ ಯೋಗ್ಯವಾಗಿದೆ ಇಂತಹ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನ ಪಡೆದುಕೊಳ್ಳುವುದು ಸರಿಯಲ್ಲ. ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಕೋಡಿಗೆಹಳ್ಳಿಯ ಲಕ್ಷ್ಮಣಸ್ವಾಮೀಜಿ ಮಠದ ಶ್ರೀ ಮೋಹನರಾಮಸ್ವಾಮೀಜಿ ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವೀಂದ್ರ ಮಾತನಾಡಿ, ರೈತರ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು. ಮನವಿಯಂತೆ ಸಭೆಯನ್ನು ಶೀಘ್ರವೇ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೆಐಎಡಿಬಿ ಭೂಸ್ವಾಧಿನ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಕೈಗಾರಿಕಾ ಇಲಾಖೆಯ ಮುಖ್ಯ ಆಯುಕ್ತರ ಜತೆ ರೈತ ಮುಖಂಡರು, ಶಾಸಕರು, ಸಂಸದರ ಸಭೆ ಆಯೋಜಿಸಿ ಉದ್ದೇಶಿತ ಯೋಜನೆಯ ಸಾಧಕ ಬಾಧಕದ ಚರ್ಚೆ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಗ್ರಾಮದ ಬೇಟೆ ರಂಗನಾಥ ದೇವಾಲಯದಿಂದ ಮೆರವಣಿಗೆ ಬಂದು ನಂತರ ಬಸ್ ನಿಲ್ದಾಣದಲ್ಲಿ ರಸ್ತೆ ತಡೆದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ರೈತ ಸಂಘದ ಸದಸ್ಯೆ ಸುಲೋಚನಮ್ಮ ವೆಂಕಟರೆಡ್ಡಿ, ಮುಖಂಡರಾದ ಗೋಪಿನಾಥ್, ಕುಮಾರ್, ಸೋಮಣ್ಣ, ವಿವೇಕ್, ಶಂಕರ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net