ಕುಂಟುತ್ತಿದೆ ಅಭಿವೃದ್ಧಿ ಕಾಮಗಾರಿ

Btw_development
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಅಮೃತ ಭಾರತ್ ಯೋಜನೆಯಡಿ ಆರಂಭಗೊಂಡಿರುವ ಬಿ.ಸಿ.ರೋಡಿನ ಬಂಟ್ವಾಳ ರೈಲು ನಿಲ್ದಾಣದ ಅಭಿವೃದ್ದಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ನೀಡಿದ್ದರು. ಅದರನ್ವಯ ಸಂಸದ ಬೃಜೇಶ್ ಚೌಟ ಅವರ ವಿಶೇಷ ಕೋರಿಕೆಯಂತೆ ರೈಲ್ವೆ ರಾಜ್ಯ ಸಚಿವ ಬಿ.ಸೋಮಣ್ಣರ ಸೂಚನೆ ಮೇರೆಗೆ ಜುಲೈ ತಿಂಗಳಿನಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಪರಿಶೀಲಿಸಿದ ಬಳಿಕವೂ ಅಭಿವೃದ್ದಿ ಕೆಲಸಗಳು ಚುರುಕು ಪಡೆದುಕೊಂಡಿಲ್ಲ.

ರೈಲ್ವೆ ಇಲಾಖೆಯ ಡಿಆರ್‌ಎಂ ಶಿಲ್ಪಾ ಅಗರ್‌ವಾಲ್, ನೈರುತ್ಯ ರೈಲ್ವೆ ಮೈಸೂರು ವಿಭಾಗದ ಜಿ.ಎಂ.ಅರವಿಂದ ಶ್ರೀವಾಸ್ತವ್ ಇದ್ದ ಅಧಿಕಾರಿಗಳ ತಂಡ ಬಂಟ್ವಾಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದರೂ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ.

ಯೋಜನೆಗೆ ಶಂಕುಸ್ಥಾಪನೆಯಾದ ಬಳಿಕ ರೈಲ್ವೆ ನಿಲ್ದಾಣದ ಮುಖ್ಯ ಕಟ್ಟಡದ ಗೋಡೆಗಳನ್ನು ಕೆಡವಿರುವುದು ಮತ್ತು ಪಕ್ಕದಲ್ಲಿ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿರುವುದು ಹೊರತುಪಡಿಸಿದರೆ ಪಟ್ಟಿಯಲ್ಲಿ ಇರುವ ಪ್ರಮುಖ ಕಾಮಗಾರಿಗಳು ಆರಂಭಗೊಂಡಿಲ್ಲ. ಅಭಿವೃದ್ಧಿಗಾಗಿ ತರಲಾದ ಕಬ್ಬಿಣ ರಾಡ್‌ಗಳು ತುಕ್ಕು ಹಿಡಿಯುತ್ತಿವೆ.

ಏನೇನು ಆಗಬೇಕಾಗಿದೆ?

ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್ ರೂಮ್, ಒಂದು ಕೆಫೆಟೆರಿಯಾ, ನಾಲ್ಕು ಕ್ಯಾಟರಿಂಗ್ ಸ್ಟಾಲ್‌ಗಳು, ಪ್ರತಿಯೊಂದು ಪ್ಲಾಟ್‌ಫಾರ್ಮ್‌ನಲ್ಲಿ ಸುಸಜ್ಜಿತ ಶೌಚಾಲಯ, ಸ್ಟೇಷನ್ ಕಟ್ಟಡಕ್ಕೆ ಗ್ರಾನೈಟ್ ನೆಲಹಾಸು, ಇತರ ಭಾಗಕ್ಕೆ ಕಾಂಕ್ರೀಟ್ ಮತ್ತು ಟೈಲ್ಸ್ ಅಳವಡಿಕೆ, ಪ್ಲಾಟ್‌ಫಾರ್ಮ್ ಉದ್ದಕ್ಕೂ ಶೆಲ್ಟರ್, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಜಾಗ, ನಿಲ್ದಾಣದ ಸುತ್ತಮುತ್ತ ಇಂಟರ್‌ಲಾಕ್ ಅಳವಡಿಸುವ ಮೂಲಕ ಸೌಂದರ್ಯವೃದ್ಧಿ, ಮಳೆಕೊಯ್ಲು ವ್ಯವಸ್ಥೆ, ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಯ ಅಭಿವೃದ್ಧಿ, ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಒಂದು ಲಿಫ್ಟ್ ಜತೆ 12 ಮೀ. ಅಗಲದ ಫೂಟ್‌ಓವರ್ ಸೇತುವೆ, ಎಸ್ಕೆಲೇಟರ್, ರ‌್ಯಾಂಪ್ ಜತೆ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ವ್ಯವಸ್ಥೆ, ಸಿಸಿ ಟಿವಿ ಅಳವಡಿಕೆ, ವೈಫೈ ಸೌಲಭ್ಯ, ಎಲ್‌ಇಡಿ ಡಿಸ್‌ಪ್ಲೇ ಮೂಲಕ ರೈಲುಗಳು ಬಂದು, ಹೋಗುವ ಕುರಿತು ಮಾಹಿತಿ, ಕೋಚ್ ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ್‌ಪ್ಲೇ ಬೋರ್ಡ್ ಅಳವಡಿಕೆ, ಸ್ಟೇಷನ್‌ನ ಮುಖ್ಯದ್ವಾರ ಸುಂದರೀಕರಣ ಈ ಯೋಜನೆಯ ಮೂಲಕ ಆಗಬೇಕಾಗಿದೆ.

ಬಿ.ಸಿ. ರೋಡ್‌ನಲ್ಲಿರುವ ಬಂಟ್ವಾಳ ರೈಲು ನಿಲ್ದಾಣವನ್ನು ಅಮೃತ ಭಾರತ್ ಯೋಜನೆಯಡಿ ಸುಮಾರು 28.39 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಫೆ.26ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಬಳಿಕ ಕಾಮಗಾರಿ ಆರಂಭಗೊಂಡು ರೈಲ್ವೆ ಪ್ರಯಾಣಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು. https://www.vijayavani.net/mangalore-diwali-sambrama-at-ocean-perl-mlc-manjunatha-bhandari https://www.vijayavani.net/creativity-from-art-to-light-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net