ಮಾರ್ಚ್ ನಂತರ ಅಭಿವೃದ್ಧಿಗೆ ವೇಗ

mkg1
Published on

ಹೊನ್ನಾಳಿ: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆಗೆ ಮೊದಲು ನೀಡಿದ್ದ ಗ್ಯಾರಂಟಿ ಭರವಸೆ ಈಡೇರಿಸುತ್ತಿರುವುದರಿಂದ ಮಾರ್ಚ್‌ವರೆಗೂ ರಾಜ್ಯದ ಅಭಿವೃದ್ಧಿ ತುಸು ಕುಂಠಿತವಾಗಲಿದ್ದು, ತದನಂತರ ವೇಗ ಪಡೆದುಕೊಳ್ಳಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ನೂತನ ಸಚಿವ ಹಾಗೂ ಶಾಸಕರಿಗೆ ಸಾಧು ವೀರಶೈವ ಸಮಾಜದಿಂದ ಏರ್ಪಡಿಸಿದ ಸನ್ಮಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ನಮ್ಮ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದೆ ಹಾಗಾಗಿ ಮಾರ್ಚ್ ನಂತರ ರಾಜ್ಯದ ಅಭಿವೃದ್ಧಿ ತೀವ್ರ ವೇಗ ಪಡೆಯಲಿದೆ ಎಂದರು.
ಜಿಲ್ಲಾದ್ಯಂತ ಕಳೆದ ಐದು ವರ್ಷದಲ್ಲಿ ಅಧಿಕಾರಿಗಳು ಜಿಡ್ಡು ಹಿಡಿದುಬಿಟ್ಟಿದ್ದಾರೆ. ಹುಣಸೆಹಣ್ಣು ಹಾಕಿ ತೊಳೆದರೂ ಜಿಡ್ಡು ಹೋಗುತ್ತಿಲ್ಲ. ಇಡೀ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಭ್ರಷ್ಟಾಚಾರ ರಹಿತ ಕೆಲಸ ಮಾಡುವ ಅಧಿಕಾರಿಗಳನ್ನು ತರಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ನಮ್ಮ ಸರ್ಕಾರ ಶಿಕ್ಷಣ, ಆಹಾರ, ಆರೋಗ್ಯ ಹಾಗೂ ಸೂರು ಸೇರಿದಂತೆ ಮೂಲಸೌಕರ್ಯ ಒದಗಿಸಲು ತೀರ್ಮಾನಿಸಿದೆ. ಯಾರೂ ಹಸಿವಿನಿಂದ ಇರಬಾರದು ಮತ್ತು ಮನೆ ಇಲ್ಲದೆ ಪರದಾಡಬಾರದು ಎಂದು ತೀರ್ಮಾನಿಸಿ ಮೊದಲಿಗೆ ಮೂಲ ಸೌಕರ್ಯ ನೀಡಲು ಸಿದ್ಧತೆ ನಡೆಸಿದೆ ಎಂದರು.

ಈ ಹಿಂದೆ ಭದ್ರಾ ಜಲಾಶಯದಲ್ಲಿ 164 ಅಡಿ ನೀರು ಸಂಗ್ರಹವಾದರೆ ರೈತರಿಗೆ ನೀರು ಕೊಡಲಾಗುತ್ತಿತ್ತು. 164 ಅಡಿ ತುಂಬುತ್ತಿದ್ದಂತೆ ಶೀಘ್ರ ನೀರು ಸರಬರಾಜು ಸಲಹಾ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯ ಎಲ್ಲ್ಲ ಕೆರೆಗಳಿಗೆ ನೀರು ತುಂಬಿಸುವ ದೃಷ್ಟಿಯಿಂದ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಹರಿಹರದ ಶಾಸಕ ಬಿ.ಪಿ. ಹರೀಶ್, ಮಾತನಾಡಿ, ಆಗಸ್ಟ್ 10ರೊಳಗೆ ಭದ್ರಾ ಜಲಾಶಯದಿಂದ ನೀರು ಬಿಡುವ ಸಂಬಂಧ ಸಚಿವರು ಸಭೆ ಕರೆದು ತಿರ್ಮಾನ ಕೈಗೊಳ್ಳಬೇಕು. ಇದು ಎಲ್ಲ ರೈತರ ಬೇಡಿಕೆ ಎಂದರು.

ಹರಿಹರದಲ್ಲಿ ಯಾರೇ ಶಾಸಕರಾಗಿ ಆರಿಸಿ ಬಂದರೂ, ಸರ್ಕಾರ ಮಾತ್ರ ಅವರ ಪಕ್ಷದ ವಿರುದ್ಧವಾಗಿ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ, ನಮ್ಮ ಹರಿಹರ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ, ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಕೊಡಿಸಿ ಎಂದು ಮನವಿ ಮಾಡಿದರು.

ಸಾಧು ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಹಿರೆಕೇರೂರು ಶಾಸಕ ಯು.ಬಿ. ಬಣಕಾರ್, ಮಾಯಕೊಂಡ ಶಾಸಕ ಬಸವಂತಪ್ಪ, ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ನ್ಯಾಮತಿ ಜಿ. ಶಿವಪ್ಪ ಮಾತನಾಡಿದರು.

ತರಗನಹಳ್ಳಿ ರಮೇಶ್, ಮಧುಗೌಡ, ಎ.ಬಿ. ಹನುಮಂತಪ್ಪ, ಅರಬಗಟ್ಟೆ ರಮೇಶ್, ರಮೇಶ್‌ಗೌಡ, ಶಿವ ಬ್ಯಾಂಕ್ ಅಧ್ಯಕ್ಷ ಪಿ.ಬಿ. ಶೈಲೇಶ್, ಕಾರ್ಯದರ್ಶಿ ರುದ್ರೇಶ್, ಬೆನಕನಹಳ್ಳಿ ಗಣೇಶ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net