ಮೌಢ್ಯ ತೊರೆದ ನಾಡು ಅಭಿವೃದ್ಧಿ

MLK HALU 21 (2)
Published on

ಮೊಳಕಾಲ್ಮೂರು: ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಮೌಢ್ಯ, ಕಂದಾಚಾರ ಬೇರೂರಿರುವುದು ನಾಡಿಗೆ ಅಭಿವೃದ್ಧಿಗೆ ತೀವ್ರ ಅಡ್ಡಿಯಾಗಿದೆ ಎಂದು ಶ್ರೀ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶರಣೆ ಅಕ್ಕ ನಾಗಮ್ಮ ಜಯಂತಿ ಅಂಗವಾಗಿ ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲು ಕುಡಿಯುವ ಹಬ್ಬದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೌಢ್ಯ ತೊಲಗಿಸಿ ವೈಚಾರಿಕ ನಡೆಯಲ್ಲಿ ಸಾಗಿ ಉತ್ತಮ ನಾಗರಿಕತೆಯ ದೀವಿಗೆ ಬೆಳಗಬೇಕಿದೆ. ಎಲ್ಲ ರಂಗಗಳಲ್ಲಿ ಜಗತ್ತು ಬೆಳದಂತೆ ಬುದ್ಧಿವಂತ ಸಮಾಜ ಹುಟ್ಟಿಕೊಂಡು ಹೊಸತನದ ಬದುಕನ್ನು ಕಟ್ಟಿಕೊಂಡಿದ್ದೇವೆ. ಆದರೆ, ಗೊಡ್ಡು ಸಂಪ್ರದಾಯಗಳು ಮಾತ್ರ ಇನ್ನೂ ಕಣ್ಮರೆ ಆಗಿಲ್ಲ ಎಂದು ಬೇಸರಿಸಿದರು.

ಹಬ್ಬ-ಹರಿದಿನಗಳ ಹೆಸರಿನಲ್ಲಿ ಪ್ರಾಣಿ ಬಲಿಕೊಡುವ ಪದ್ಧತಿ, ಶ್ರಾವಣ ಮಾಸ ವೃತಾಚರಣೆ ಎಂದು ನಾಗರ ಕಲ್ಲಿಗೆ ಅಥವಾ ಹುತ್ತಕ್ಕೆ ಹಾಲೆರೆಯುವುದು, ಹರಕೆ, ಹೋಮ ಹೆಸರಲ್ಲಿ ಹಾಲು-ತುಪ್ಪ, ದುಬಾರಿ ಬಟ್ಟೆಗಳನ್ನು ವ್ಯರ್ಥಗೊಳಿಸುವುದು… ಹೀಗೆ ಅನೇಕ ಅವೈಜ್ಞಾನಿಕ ಆಚರಣೆಗಳು ಸಮಾಜದಲ್ಲಿ ಜೀವಂತವಾಗಿದೆ. ಪೌಷ್ಟಿಕ ಆಹಾರ ಹಾಗೂ ಜನಬಳಕೆ ವಸ್ತುಗಳನ್ನು ವ್ಯರ್ಥ ಮಾಡುವುದು ಅಪರಾಧ ಎಂಬ ಅರಿವು ಜನರಲ್ಲಿ ಮೂಡಬೇಕು ಎಂದರು.

ಇಂತಹ ಅನೇಕ ಮೌಢ್ಯಾಚರಣೆಗಳಿಂದ ಜನರು ಮುಕ್ತರಾಗಿ ಪರೋಪಕಾರಿ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂಲಕ ಸಾರ್ಥಕ ಜೀವನ ನಡೆಸಬೇಖು ಎಂದು ಹೇಳಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಆಹಾರದ ಕೊರತೆ ದೊಡ್ಡ ಸವಾಲಾಗಿದ್ದು, ತುತ್ತು ಅನ್ನ, ನೀರಿಗೂ ಪರಿತಪಿಸುವ ಸನ್ನಿವೇಶಗಳನ್ನು ಕಣ್ಣಾರೆ ನೋಡುತ್ತಿದ್ದೇವೆ. ಆದ್ದರಿಂದ ವಾಸ್ತವತೆ ಅರಿತು, ಮಾನವೀಯ ಗುಣ ಬೆಳೆಸಿಕೊಂಡು ಇಂತಹ ಅನರ್ಥ ಆಚರಣೆಗಳನ್ನು ಕೈಬಿಟ್ಟು ಬಡವರಿಗೆ ದಾನ, ಧರ್ಮ ಮಾಡುವ ಮನೋಧರ್ಮ ಬೆಳಸಿಕೊಳ್ಳಬೇಕು ಎಂದರು.

ಹುಟ್ಟಿದ ಮನುಷ್ಯ ಒಂದು ದಿನ ಮಣ್ಣಾಗಲೇಬೇಕು. ಇರುವಷ್ಟು ದಿನ ನಾನು ನನ್ನದೆಂಬ ಅಹಾಂಕಾರ ತೊರೆದು ನಿಸ್ವಾರ್ಥ ಜೀವನ ನಡೆಸಬೇಕು. ಗುರು-ಹಿರಿಯರನ್ನು ಪೂಜ್ಯ ಸ್ಥಾನದಲ್ಲಿಟ್ಟು ಗೌರವಿಸಬೇಕು. ಸಮಾಜವನ್ನು ಅತ್ಯಂತ ಗೌರವದಿಂದ ಕಾಣಬೇಕು. ಕಾಯಕ ಜೀವನ ರೂಢಿಸಿಕೊಳ್ಳಬೇಕು. ಈ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಚಿಂತಕ ಡಾ.ಸುದೀಂದ್ರಬಾಬು ಮಾತನಾಡಿ, ಆರೋಗ್ಯ ಪೂರ್ಣ ಜೀವನಕ್ಕೆ ಹಾಲು ಅತ್ಯಂತ ಶ್ರೇಷ್ಠವಾದುದ್ದು, ಅದನ್ನು ದೇವರು, ಆಚರಣೆ, ಹರಕೆ ಹೆಸರಲ್ಲಿ ವ್ಯರ್ಥಗೊಳಿಸುವುದು ಮಹಾಪರಾಧ. ಆಧುನಿಕ ಜಗತ್ತಿನಲ್ಲೂ ಬಹಳಷ್ಟು ಮಂದಿ ಒಂದೊತ್ತು ಊಟಕ್ಕೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭ ಆಹಾರವನ್ನು ವ್ಯರ್ಥ ಮಾಡುವುದು ಪಾಪದ ಕೆಲಸ. ಆದ್ದರಿಂದ ದೇವರ ಹೆಸರಲ್ಲಿ ಸಂಕಷ್ಟದಲ್ಲಿರುವ ಜನರಿಗೆ ದಾನ ಮಾಡುವುದೇ ಪುಣ್ಯ ಕಾರ್ಯ ದರು.

ಶಾಲಾ ಮಕ್ಕಳಿಗೆ ಶ್ರೀಗಳು ಹಾಲು ಕುಡಿಸುವ ಮೂಲಕ ನಾಗರಪಂಚಮಿ ಹಬ್ಬವನ್ನು ಆಚರಿಸಿದರು. ಮಠದ ಕಾರ್ಯದರ್ಶಿ ಕಾಂತರಾಜ್, ಗಡಿನಾಡು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಶಿಕ್ಷಕರಾದ ಫೆನ್ನಯ್ಯ, ಲೋಕಮ್ಮ, ನಾಗಮ್ಮ, ಅರ್ಚನಾ, ರೂಪಾ, ನೀಲಕಂಠಪ್ಪ, ಚಂದ್ರಯ್ಯ, ಆರ್.ವಿ.ಮಂಜುನಾಥ, ತಿಪ್ಪೇಸ್ವಾಮಿ, ನಾಗರಾಜ್, ಮಂಜಯ್ಯ, ಪಿ.ಮಹಾಂತೇಶ್, ಕಾಂತಪ್ಪ, ನವೀನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net