

ಬೆಂಗಳೂರು: ಮನುಷ್ಯನಾದವನು ತನ್ನ ದೇಹದ ಸೌಂದರ್ಯಕ್ಕಿಂತ ದೇಶದ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ನೀಡಬೇಕು. ದೇಶದ ಅಭಿವೃದ್ಧಿಯಲ್ಲಿ ತನ್ನ ಒಳಿತು ಕೂಡಾ ಅಡಗಿದೆ ಎಂದು ಸಾಹಿತಿ ಹಾಗೂ ಭಾಷಣಕಾರ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317ಎ ವತಿಯಿಂದ ಕೊಂಡಜ್ಜಿ ಬಸಪ್ಪಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾಂತೀಯ 2ರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ತನ್ನ ದೇಹ ಎಷ್ಟು ಮುಖ್ಯವೋ ತಾನು ವಾಸಿಸುತ್ತಿರುವ ದೇಶವು ಅಷ್ಟೇ ಮುಖ್ಯ. ಆ ದೃಷ್ಟಿಯಲ್ಲಿ ನಮ್ಮ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ದೇಶ ಚಿಂತನೆಯ ಮೂಲಕ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಆಗ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ಆದ್ದರಿಂದ ದೇಶಪ್ರೇಮವನ್ನು ಎಲ್ಲರೂ ಅಳವಡಿಸಿಕೊಂಡಿದ್ದಲ್ಲಿ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಸಂಸ್ಕೃತಿ ದಿಗಂತದೆತ್ತರಕ್ಕೆ ಏರಲು ಸಾಧ್ಯವಾಗುತ್ತದೆ. ಅಲ್ಪ ಮಾನವರಾಗದೆ ವಿಶ್ವ ಮಾನವರಾಗುವ ಪ್ರಯತ್ನವನ್ನು ನಾವು ಮಾಡಬೇಕು ಎಂದು ಕಣ್ಣನ್ ಕರೆ ನೀಡಿದ್ದಾರೆ.
ಸೇವಾ ಚಟುವಟಿಕೆಯಾಗಿ ವಿದ್ಯಾರ್ಥಿಗಳಿಗೆ ಮೂರು ಲ್ಯಾಪ್‌ಟಾಪ್, ಲಾನುಭವಿಗಳಿಗೆ ಎರಡು ಹೊಲಿಗೆ ಯಂತ್ರ, ನರ್ಸರಿಯಿಂದ ಏಳನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸೂರ್ಯ ಕಿರಣ ಫೌಂಡೇಶನ್ ಸಹಕಾರದಲ್ಲಿ 10 ಶ್ರವಣ ಸಾಧನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲ ಹರಟೆಮಲ್ಲಿ ಖ್ಯಾತಿಯ ನಾಗಶ್ರೀ ತ್ಯಾಗರಾಜ್, ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ಗೌರ್ನರ್ ಎನ್.ಮೋಹನ್ ಕುಮಾರ್, ಪ್ರಾಂತಿಯ 2ರ ಅಧ್ಯಕ್ಷ ಎಸ್.ಮನೋಜ್ ಕುಮಾರ್, ಲಯನ್ ಅಜಂತಾ ಎಸ್ ರಂಗಸ್ವಾಮಿ, ಲಯನ್ ಜಿ.ಪಿ.ದಿವಾಕರ್, ಶಿವನಂಜಯ್ಯ, ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.