ಕುಶಾಲನಗರ ಅಭಿವೃದ್ಧಿಗೆ ಆರ್.ಗುಂಡೂರಾವ್ ಶ್ರಮ ಕಾರಣ

ಕುಶಾಲನಗರದಲ್ಲಿ ಆಯೋಜಿಸಿದ್ದ ಆರ್.ಗುಂಡೂರಾವ್ ಪುಣ್ಯಸ್ಮರಣೆ  ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ವಿ.ಪಿ.ಶಶಿಧರ್, ಎಂ.ಕೆ.ದಿನೇಶ್, ಆರ್.ಕೆ.ನಾಗೇಂದ್ರ ಬಾಬು, ಕೆ.ಎಸ್. ಮೂರ್ತಿ, ಎಂ.ಎನ್. ಚಂದ್ರಮೋಹನ್ ಮತ್ತಿತರರು ಇದ್ದರು.
ಕುಶಾಲನಗರದಲ್ಲಿ ಆಯೋಜಿಸಿದ್ದ ಆರ್.ಗುಂಡೂರಾವ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ವಿ.ಪಿ.ಶಶಿಧರ್, ಎಂ.ಕೆ.ದಿನೇಶ್, ಆರ್.ಕೆ.ನಾಗೇಂದ್ರ ಬಾಬು, ಕೆ.ಎಸ್. ಮೂರ್ತಿ, ಎಂ.ಎನ್. ಚಂದ್ರಮೋಹನ್ ಮತ್ತಿತರರು ಇದ್ದರು.
Published on

ಕುಶಾಲನಗರ; ನಾಡು ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪರಿಶ್ರಮದ ಫಲವಾಗಿ ಕುಶಾಲನಗರ ಅಭಿವೃದ್ಧಿ ಸಾಧ್ಯವಾಯಿತು ಎಂದು ಕುಶಾಲನಗರ ತಾಲೂಕು ಹೋರಾಟ ಸಮಿತಿ ರೂವಾರಿ ವಿ.ಪಿ. ಶಶಿಧರ್ ಹೇಳಿದರು.

ಸಮಾನ ಮನಸ್ಕರ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಗುಂಡೂರಾವ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂರು ದಶಕಗಳ ಹಿಂದೆಯೇ ಮುಂದಿನ ಮುವತ್ತು ವರ್ಷಗಳ ದೂರದೃಷ್ಟಿ ಹೊಂದುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ ಗುಂಡೂರಾವ್ ಅವರನ್ನು ಊರು ನಿತ್ಯವೂ ಸ್ಮರಿಸುತ್ತದೆ. ಅವರ ಪ್ರತಿಮೆಯನ್ನು ಕುಶಾಲನಗರದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಲೇಬೇಕಿದೆ ಎಂದರು.

ನಾವುಗಳು ಇನ್ನು ಹೇಳುವುದು ಬಿಟ್ಟು ಮಾಡಿ ತೋರಿಸುವತ್ತ ಮಗ್ನರಾಗುತ್ತೇವೆ. ಗುಂಡೂರಾವ್ ಪ್ರತಿಮೆ ಮಾಡಲು ಹೊರಟರೆ ಅವರ ಶಿಷ್ಯಂದಿರಾದ ಸಚಿವ ಕೆ.ಜೆ.ಜಾರ್ಜ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮೊದಲಾದ ಘಟಾನುಘಟಿಗಳು ಅಗತ್ಯವಿರುವ ಎಲ್ಲ ಸಹಕಾರ ನೀಡಲಿದ್ದಾರೆ ಎಂದರು.

ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಗುಂಡೂರಾವ್ ಅವರ ಹೆಸರು ಕುಶಾಲನಗರ ಊರಿನೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ಅವರ ಹೆಸರನ್ನು ಊರಿನವರು ಒಗ್ಗೂಡಿ ಚಿರಸ್ಥಾಯಿಗೊಳಿಸಬೇಕೆಂದರು.

ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಗುಂಡೂರಾವ್ ಕುಶಾಲನಗರಕ್ಕೆ ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಪಟ್ಟಿ ಮಾಡಿದರೆ ಯಾವುದೇ ಜನಪ್ರತಿನಿಧಿಗಳಿಂದ ಅಂತಹ ಪ್ರಗತಿ ಸಾಧ್ಯವಾಗಿಲ್ಲ ಎಂದರು.

ಸಮಾನ ಮನಸ್ಕರ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಮಾತನಾಡಿ, ಗುಂಡೂರಾವ್ ಕಟ್ಟಿ ಬೆಳೆಸಿದ ಕುಶಾಲನಗರದಲ್ಲಿ ಬದುಕು ಕಟ್ಟಿಕೊಂಡಿರುವ ಪ್ರತಿಯೊಬ್ಬರೂ ಅವರನ್ನು ಸ್ಮರಿಸಬೇಕು. ಏಕೆಂದರೆ ಆ ಕಾಲ ಘಟ್ಟದಲ್ಲಿಯೇ ಶುದ್ಧ ಕಾವೇರಿ ಕುಡಿವ ನೀರಿನ ಯೋಜನೆ, ಕೈಗಾರಿಕಾ ಬಡಾವಣೆ…ಹೀಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ ನೇತಾರ ಎಂದು ಸ್ಮರಿಸಿದರು.

ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕುಶಾಲನಗರ ಜಿಲ್ಲೆಯಲ್ಲಿಯೇ ಹೆಚ್ಚು ಅಭಿವೃದ್ಧಿ ಹೊಂದಲು ಕಾರಣೀಭೂತರಾಗಿರುವ ಗುಂಡೂರಾವ್ ಅವರ ಹೆಸರಿನಲ್ಲಿ ಜಿಲ್ಲಾಡಳಿತ ಪ್ರತಿ ವರ್ಷ ಕಾರ್ಯಕ್ರಮ ರೂಪಿಸಬೇಕು ಎಂದರು.

ಉದ್ಯಮಿ ಮಂಜುನಾಥ್ ಗುಂಡೂರಾವ್, ಎಸ್.ಎನ್.ರಾಜೇಂದ್ರ, ಪುರಸಭೆ ಸದಸ್ಯ ಬಿ.ಅಮೃತರಾಜು, ಮಾಜಿ ಸದಸ್ಯ ಎಂ. ನಂಜುಂಡಸ್ವಾಮಿ ಮಾತನಾಡಿದರು. ಮಾಜಿ ಸದಸ್ಯ ಕೆ.ಜಿ. ಮನು, ಕಲಾವಿದ ರಾಜು, ಮಂಜುನಾಥ್, ಪ್ರಕಾಶ್, ಗಯಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net