

ಅರಸೀಕೆರೆ ಗ್ರಾಮಾಂತರ: ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ತಾಲೂಕಿನ ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆ-ಹಾಸನ ರಾಜ್ಯ ಹೆದ್ದಾರಿಯಿಂದ ಯಾದಾಪುರ ಗ್ರಾಮದ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಸನ್ನಿಧಾನಕ್ಕೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ರಸ್ತೆ ಕಾಮಗಾರಿಯಿಂದ ಪುಣ್ಯ ಕ್ಷೇತ್ರಕ್ಕೆ ಬರುವ ಸಹಸ್ರಾರು ಭಕ್ತರ ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ ಎಂದರು.
ಕೊಳವೆ ಮೂಲಕ ಯಗಚಿ ನದಿ ಮೂಲದಿಂದ ಶ್ರೀ ಕ್ಷೇತ್ರ ಸೇರಿದಂತೆ ಅರಸೀಕೆರೆ ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಪೊರೈಕೆಗೆ ರೂಪುರೇಷೆ ಸಿದ್ಧಗೊಳ್ಳುತ್ತಿದೆ ಎಂದರು.
ಅದೇ ರೀತಿ ಯಾದಾಪುರ ಹಾಗೂ ಜೇನಕಲ್ ಸಿದ್ದೇಶ್ವರ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರನ್ನು ಗಮನದಲ್ಲಿರಿಸಿಕೊಂಡು ವಿಶೇಷವಾಗಿ, ಕುಡಿಯವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬೃಹತ್ ಟ್ಯಾಂಕ್‌ಗಳಿಗೆ ನೀರು ತಲುಪಿದ್ದು, ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಭಕ್ತರ ದಶಕಗಳ ಬೇಡಿಕೆ ಸಾಕಾರಗೊಂಡಂತಾಗಿದೆ ಎಂದರು.
ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಜೇನುಕಲ್ ಸಿದ್ದೇಶ್ವರಸ್ವಾಮಿ ಕ್ಷೇತ್ರದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನನ್ನಿಂದ ಆಗುವ ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಡುವುದು ಸ್ವಾಮಿಗೆ ನಾನು ಮಾಡುವ ಸೇವೆ ಎಂದು ಭಾವಿಸಿ, ತನುಮನದಿಂದ ಭಕ್ತಿ ಸಮರ್ಪಣೆ ಮಾಡುವೆ ಎಂದರು.
ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ್ ಮಾತನಾಡಿ, ಐತಿಹಾಸಿಕ ಶ್ರೀ ಜೇನುಕಲ್ ಸ್ವಾಮಿ ಸಿದ್ದೇಶ್ವರ ಜಾತ್ರೆಗೆ ಕೆಲವೇ ದಿನಗಳು ಬಾಕಿ ಇದ್ದು, ಅಷ್ಟರೊಳಗೆ ಮಾಡಬೇಕಾದ ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಸ್ವಾಮಿ ಅವರ ಜಾತ್ರಾ ಮಹೋತ್ಸವ ನಡೆಸಲು ಶಾಸಕರು, ಗ್ರಾಮಸ್ಥರ ಸಹಕಾರದೊಂದಿಗೆ ದೇವಾಲಯ ಅಭಿವೃದ್ಧಿ ಸಮಿತಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಗುತ್ತಿಗೆದಾರ ಜ್ಞಾನೇಶ್, ತಾಪಂ ಮಾಜಿ ಸದಸ್ಯ ನಾರಾಯಣಮೂರ್ತಿ, ರವಿ, ನಾರಾಯಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಸಿದ್ದಪ್ಪ, ದೇವರಾಜ್, ಯಾದಾಪುರ ತೇಜಸ್, ಬೋರನಕೊಪ್ಪಲು ರವಿ ಇತರರು ಇದ್ದರು.