

ಸಂಬರಗಿ: ಅಥಣಿ ತಾಲೂಕು ಅನಂತಪುರದಿಂದ ಯಕ್ಕುಂಡಿಗೆ ಹೋಗುವ ರಸ್ತೆ ಇತ್ತೀಚೆಗೆ ಹಾಳಾಗಿದ್ದು, ಡಾಂಬರು ಹಾಕಿ ದುರಸ್ತಿ ಮಾಡಿಸಬೇಕಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮುಳ್ಳುಗಂಟಿ ಆವರಿಸಿದ್ದು ರಸ್ತೆ ತುಂಬಾ ಇಕ್ಕಟ್ಟಾಗಿದೆ.
ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ರಸ್ತೆಯಲ್ಲಿರುವ ಮುಳ್ಳು ಗಿಡಗಳನ್ನು ತಕ್ಷಣ ತೆರವುಗೊಳಿಸಿ, ರಸ್ತೆ ವಿಸ್ತರಣೆಗೆ ಕ್ರಮವಹಿಸಬೇಕು, ರಸ್ತೆಗೆ ಡಾಂಬರು ಹಾಕಬೇಕು ಎಂದು ವಾಹನ ಮಾಲೀಕರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಶಾಲಾ ಮಕ್ಕಳು ಪ್ರತಿದಿನ ಈ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ರಸ್ತೆಯ ಎರಡೂ ಬದಿಗಳಲ್ಲಿ ಎರಡು ಕಿ.ಮೀ.ಗಳಷ್ಟು ಮುಳ್ಳುಗಿಡ ವ್ಯಾಪಿಸಿದ್ದು, ಕೆಲವೆಡೆ ರಸ್ತೆಗೆ ಅಡ್ಡಬಂದಿವೆ. ಯಾವುದಾದರೂ ವಾಹನ ಎದುರಿನಿಂದ ಬಂದಾಗ ಮಕ್ಕಳು ಮುಳ್ಳುಗಿಡಗಳನ್ನು ಕೈಯಿಂದ ಪಕ್ಕಕ್ಕೆ ಸರಿಸಿ ರಸ್ತೆ ದಾಟಬೇಕಿದೆ.
ಮುಳ್ಳುಗಂಟಿಗಳಲ್ಲಿ ಅಡಗಿರುವ ಹುಳ-ಹುಪ್ಪಟೆಗಳು, ಹಾವುಗಳಂತಹ ವಿಷಜಂತುಗಳಿಂದ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆಯೂ ಇದೆ. ಇದಲ್ಲದೆ, ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿಗಳು ಮತ್ತಷ್ಟು ಹೆಚ್ಚಿದ್ದು, ಸಂಚಾರ ದುಸ್ತರವಾಗಿದೆ.
ಈ ಕುರಿತು ಹಲವು ಬಾರಿ ಪತ್ರಿಕಾ ವರದಿಗಳು ಪ್ರಕಟವಾಗಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮವಹಿಸಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರಾನಂದ ಗುಂಧವಾನ್ ಅವರನ್ನು ಸಂಪರ್ಕಿಸಿದ್ದು, ರಸ್ತೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ.