

ಕುಂದಗೋಳ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಚಾಕಲಬ್ಬಿ-ಭಾರದ್ವಾಡ ಮಾರ್ಗ ಮಧ್ಯೆ ಇರುವ ಮೂಡಗಡಿ ಹಳ್ಳದ ಸರುವೊಂದು ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ರೈತರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ವರುಣಾರ್ಭಟಕ್ಕೆ ನಲುಗಿದ ಸರುವಿನ ಪೈಪುಗಳು ಕಿತ್ತೆದ್ದು ಹೋಗಿ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ.
ಸಂಬಂಧಪಟ್ಟ ಇಲಾಖೆ ತಾತ್ಕಾಲಿಕವಾಗಿ ಎರಡು ಪೈಪ್ ಹಾಕಿ, ಮಣ್ಣಿನಿಂದ ಸರಿದೂಗಿದ ದಾರಿಯ ವ್ಯವಸ್ಥೆ ಮಾಡಿದ್ದರೂ ಅದು ನಿರಂತರ ಮಳೆಗೆ ಕೊಚ್ಚಿ ಹೋಗಿದೆ.
ಇದರಿಂದ ಗ್ರಾಮಸ್ಥರು ಮತ್ತೆ ಸಂಚಾರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ರೈತರು ಹಲವಾರು ಬಾರಿ ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಪಂಚಾಯತ್ ರಾಜ್ ಉಪವಿಭಾಗದ ಇಂಜಿನಿಯರ್ಗಳಿಗೆ ಮನವಿ ಸಲ್ಲಿಸಿದ್ದಾರೆ.
ಮೊಬೈಲ್ಫೋನ್ ಮೂಲಕ ತಿಳಿಸಿದರೂ ಯಾವುದೇ ಕ್ರಮವಾಗಿಲ್ಲ. ಈ ಸರುವಿನಿಂದ ಹಾನಿಯಾಗುವುದನ್ನು ತಪ್ಪಿಸಲು ತಾತ್ಕಾಲಿಕ ಪರಿಹಾರ ಒದಗಿಸಬೇಕು ಇಲ್ಲವೆ ಶಾಶ್ವತವಾಗಿ ಬ್ರಿಜ್ ನಿರ್ವಿುಸಬೇಕು ಎಂದು ರೈತರಾದ ಹನುಮರಡ್ಡಿ ಇಟಗಿ, ಮಂಜುನಾಥ ಇಟಗಿ, ಮಲ್ಲಪ್ಪ ಅಣ್ಣಿಗೇರಿ, ಗೋವಿಂದರಡ್ಡಿ ಇಟಗಿ, ಬಸವರಾಜ ಮಾಡೋಳ್ಳಿ ಇತರರು ಒತ್ತಾಯಿಸಿದ್ದಾರೆ.