

ಹನೂರು: ತಾಲೂಕಿನ ಅಜ್ಜೀಪುರ ಸಮೀಪದ ಕಾಂಚಳ್ಳಿ ಗ್ರಾಮದ ಜಮೀನೊಂದಕ್ಕೆ ಬುಧವಾರ ರಾತ್ರಿ ಕಾಡಾನೆಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.
ಶಿವರಾಜು ಅವರು ಗ್ರಾಮದ ಹೊರವಲಯದಲ್ಲಿನ ಜಮೀನಲ್ಲಿ ಮುಸುಕಿನ ಜೋಳ ಬೆಳೆ ಬೆಳೆದಿದ್ದರು. ಫಸಲು ತೆನೆ ಕಟ್ಟುವ ಹಂತಕ್ಕೆ ಬಂದಿತ್ತು. ಆದರೆ ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸುವ ಮೂಲಕ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸುವಂತೆ ಹಾಗೂ ಕಾಡಾನೆಗಳು ಜಮೀನಿನತ್ತ ಬಾರದಂತೆ ಕಡಿವಾಣ ಹಾಕುವಂತೆ ರೈತ ಶಿವರಾಜು ಒತ್ತಾಯಿಸಿದ್ದಾರೆ.