

ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯ ವಿವರ ಅರಿಯದೆ ಕಾಂಗ್ರೆಸ್ ಹಾಗೂ ಸ್ವಘೋಷಿತ ಬುದ್ಧಿ ಜೀವಿಗಳು ಸಮಾಜದ ಸ್ವಾಸ್ಥೃವನ್ನು ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಪ್ರೀತಂ ಜೆ.ಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಸಿಎಎ ಹಾಗೂ ಎನ್‌ಆರ್‌ಸಿ ತಾಲೂಕು ಮಟ್ಟದ ಜನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿರುವ ಶೋಷಿತ ಮುಸ್ಲಿಮೇತರರು ಭಾರತಕ್ಕೆ ಬಂದು ನೆಲೆಸಲು ಅನುಕೂಲ ಕಲ್ಪಿಸುವುದು ಕಾಯ್ದೆಯ ಉದ್ದೇಶ. ಭಾರತದ ಪೌರತ್ವ ಪಡೆಯಲು 6 ವರ್ಷ ಇಲ್ಲಿಯೇ ನೆಲೆಸಿರಬೇಕೆಂಬ ಕಾನೂನಿದೆ. ಮೂರು ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟ್ಸ್ ಎಂದು ಘೋಷಿಸಿಕೊಂಡಿರುವುದರಿಂದ ಅಲ್ಲಿಂದ ಬರುವ ಮುಸ್ಲಿಮರಿಗೆ ಪ್ರವೇಶ ನೀಡುವುದು ಕಷ್ಟವಾಗುತ್ತದೆ. ನುಸುಳುಕೋರರು ಹೆಚ್ಚಿರುವ ಕಾರಣ ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದರು.
ಬಿಜೆಪಿಯ ಗೆಲುವು ಸಹಿಸದ ಎಡಪಂಥೀಯರು ಕಾಯ್ದೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕಮ್ಯುನಿಸ್ಟ್ ಚಿಂತನೆಗಳಿಂದ ಪ್ರೇರಿತರಾಗಿರುವ ಅವರು ಪ್ರಜಾಪ್ರಭುತ್ವವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ರಚಿತ ಸಂವಿಧಾನವನ್ನು ಕಾಂಗ್ರೆಸ್‌ನವರು ಸಮಗ್ರವಾಗಿ ಓದಿ ಅರ್ಥೈಸಿಕೊಂಡಿದ್ದರೆ ಸಿಎಎ ಹಾಗೂ ಎನ್‌ಆರ್‌ಸಿ ಕುರಿತು ಸುಳ್ಳು ಸುದ್ದಿ ಹರಡುತ್ತಿರಲಿಲ್ಲ. ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ಯಾವ ಮಾರ್ಗ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಎ ಜಾಗೃತಿ ಅಭಿಯಾನ ಸಂಚಾಲಕ ಎಚ್.ಎಂ. ಸುರೇಶ್ ಕುಮಾರ್ ಮಾತನಾಡಿ, ಭಾರತದಲ್ಲಿ ವಾಸಿಸುತ್ತಿರುವವರಿಗೆ ಪೌರತ್ವ ನೀಡುವ ಕುರಿತು 2003ರಲ್ಲಿ ಮನಮೋಹನ್ ಸಿಂಗ್ ಚಿಂತನೆ ನಡೆಸಿದ್ದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಸಿಎಎ ಪರವಾಗಿ ಮಾತನಾಡಿದ್ದರು. ಆದರೆ ಈಗ ನರೇಂದ್ರ ಮೋದಿ ಕಾಯ್ದೆ ಜಾರಿಗೆ ತಂದಿದ್ದಾರೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದರು.
ಸಮಾಜದಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಷ ಬೀಜ ಬಿತ್ತುವ ಮೂಲಕ ಪ್ರತಿಭಟನೆಗೆ ಉತ್ತೇಜಿಸಲಾಗುತ್ತದೆ. ಎನ್‌ಆರ್‌ಸಿ ಕುರಿತು ಪಾರ್ಲಿಮೆಂಟ್‌ನಲ್ಲಿ ಚರ್ಚೆ ನಡೆದಿಲ್ಲ. ಎಡಪಕ್ಷಗಳು ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದರು.
ಬಿಜೆಪಿ ನಗರ ಅಧ್ಯಕ್ಷ ಶೋಬನ್‌ಬಾಬು, ತಾಪಂ ಸದಸ್ಯ ಪ್ರದೀಪ್, ಮಹಿಳಾ ಘಟಕದ ಮುಖ್ಯಸ್ಥೆ ಸುಶೀಲಾ ಅಣ್ಣಪ್ಪ, ಯೋಗೀಶ್, ರಕ್ಷಿತ್, ಎಸ್.ಎನ್. ವೇಣುಗೋಪಾಲ್ ಇತರರಿದ್ದರು.
ಜನಗಣತಿ ಮಾಡಿದರೆ ಅದಕ್ಕೆ ಸಿಎಎ ಹೆಸರಿಟ್ಟು ವಿರೋಧಿಸುವವರ ಮಧ್ಯೆ ನಾವಿದ್ದೇವೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಅಶಾಂತಿ ಸೃಷ್ಟಿಸಲು ಮುಂದಾಗಿದೆ. ಪ್ರಜ್ಞಾವಂತ ನಾಗರಿಕರು ಇದೆಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ.
ಪ್ರೀತಂ ಜೆ. ಗೌಡ, ಶಾಸಕ