ಸಾಮರಸ್ಯ ನಾಶವೇ ಬಿಜೆಪಿ ಸಾಧನೆ

The destruction of harmony is BJP's achievement
ನರಗುಂದ ತಾಲೂಕಿನ ಹೊಂಬಳ ಗ್ರಾಮದಲ್ಲಿ ಕಾರ್ಯಕರ್ತರ ಸಭೆಗೆ ಮುನ್ನ ಮತಯಾಚನೆಯಾತ್ರೆಯಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ವಾಸಣ್ಣ ಇತರರಿದ್ದರು.
Published on

ನರಗುಂದ : ಮೋದಿ ಗ್ಯಾರಂಟಿ ಎಂಬ ಕನ್ನಡಿಯೊಳಗಿನ ಗಂಟಿಗೆ ಮತ್ತೆ ಮಾರು ಹೋಗಬೇಡಿ. ದೇಶದಲ್ಲಿ ಸಾಮರಸ್ಯ ನಾಶ ಮಾಡಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ವಾಗ್ದಾಳಿ ನಡೆಸಿದರು.

ಬುಧವಾರ ತಾಲೂಕಿನ ಹೊಂಬಳದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಆದರೆ ಬಿಜೆಪಿ ನಾಯಕರಿಗೆ ಎಲ್ಲ ಸಮಾಜಗಳು ಸಾಮರಸ್ಯದಿಂದ ಬದುಕುವುದು ಬೇಕಿಲ್ಲ. ಧರ್ಮ-ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡಿ ಸಮಾಜವನ್ನು ವಿಘಟನೆ ಮಾಡುವುದೇ ಅವರ ಗುರಿ ಎಂದು ಟೀಕಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಹೇಳಿದ್ದು ಎಲ್ಲವೂ ಸುಳ್ಳಿನ ಕಂತೆ. ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಕೃಷಿ ಆದಾಯ ದ್ವಿಗುಣ ಮಾಡುತ್ತೇವೆ ಎಂದರು. ಆದರೆ ಯಾವುದೇ ಭರವಸೆ ಈಡೇರಲಿಲ್ಲ. ಕೃಷಿ ಆದಾಯ ದ್ವಿಗುಣದ ಮಾತು ಇರಲಿ, ಕೃಷಿ ಉಪಕರಣಗಳ ಬೆಲೆ ಹೆಚ್ಚಳವಾಯಿತು. ರಸಗೊಬ್ಬರದ ಬೆಲೆ ಗಣನೀಯವಾಗಿ ಏರಿಕೆಯಾಯಿತು. ಇದು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿ ಎಂದು ಕುಟುಕಿದರು.

ಪಿ.ಎಸ್. ಗದ್ದಿಗೌಡರ ಅವರಿಗೆ ಬಾಗಲಕೋಟೆ ಕ್ಷೇತ್ರದ ಮತದಾರರು ಸತತ ನಾಲ್ಕು ಬಾರಿ ಅವಕಾಶ ಕೊಟ್ಟರು. ಜನ ಅಧಿಕಾರ ಕೊಟ್ಟಾಗ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ನಾಲ್ಕು ಬಾರಿ ಅವಕಾಶ ಕೊಟ್ಟರೂ ಕೆಲಸ ಮಾಡದಿದ್ದರೆ ಅವರು ಸಂಸದರಾದಲು ಯೋಗ್ಯರಲ್ಲ ಎಂದು ಭಾವಿಸಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಕಾನೂನು ಪದವೀಧರೆಯಾಗಿದ್ದು, ಹಲವು ಭಾಷೆಗಳ ಜ್ಞಾನ ಹೊಂದಿದ್ದಾರೆ. ಇಂಥವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದರೆ ಅಲ್ಲಿ ನಮ್ಮ ಕ್ಷೇತ್ರದ ಧ್ವನಿಯಾಗಲಿದ್ದಾರೆ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಪರವಾದ ವಾತಾವರಣ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಕಾಂಗ್ರೆಸ್ ಪರ ಇರುವ ವಾತಾವರಣವನ್ನು ಮತಗಳನ್ನಾಗಿ ಪರಿವರ್ತಿಸಿ ಎಂದು ಹೇಳಿದರು.
ವಿವೇಕ್ ಯಾವಗಲ್, ಪುಷ್ಪಾ ಕೊಣ್ಣೂರು, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಿ ಮತ್ತಿತರರು ಮಾತನಾಡಿದರು. ಪ್ರವೀಣ್ ಯಾದವ್, ನೀಲಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.

ಯಾವಗಲ್ ಹೇಳಿದ ಕತೆ

2014ರಲ್ಲಿ ಜನ ಸರದಿಯಲ್ಲಿ ನಿಂತು ಬ್ಯಾಂಕಿನಲ್ಲಿ ಅಕೌಂಟ್ ತೆರೆದರು. ಯಾಕೆ ಎಂದು ಕೇಳಿದರೆ ಮೋದಿ ನಮ್ಮ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತಾರೆ ಎಂದು ಹೇಳಿಕೊಂಡರು. ಖಾತೆ ತೆರೆದು ದಿನದ ಬ್ಯಾಂಕಿಗೆ ಹೋಗಿ ಚೆಕ್ ಮಾಡಿದ್ದೇ ಮಾಡಿದ್ದು. 15 ಲಕ್ಷ ರೂಪಾಯಿಗಳ ಮಾತಿರಲಿ, 15 ಪೈಸೆ ಕೂಡ ಜಮಾ ಆಗಲಿಲ್ಲ. ಇದು ನರೇಂದ್ರ ಮೋದಿ ಅವರ ಭರವಸೆ ಎಂದು ಬಿ.ಆರ್. ಯಾವಗಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net