ಸರ್ವರಿಗೂ ನ್ಯಾಯ ನೀಡುವುದು ಪ್ರಾಧಿಕಾರದ ಆಶಯ

1nrp 1.
Published on

ಎನ್.ಆರ್.ಪುರ: ಬಡ ಜನರಿಗೆ ಉಚಿತವಾಗಿ ನ್ಯಾಯ ಒದಗಿಸಿಕೊಡಲು ಕಾನೂನು ಸೇವಾ ಪ್ರಾಧಿಕಾರ ಸ್ಥಾಪನೆಯಾಗಿದೆ ಎಂದು ವಕೀಲ ಪೌಲ್‌ಚೆರಿಯನ್ ತಿಳಿಸಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮೂರು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಉಚಿತ ಕಾನೂನು ಸೇವೆ ನೀಡಲಾಗುವುದು. ಈ ಪ್ರಾಧಿಕಾರದಿಂದ ಮಹಿಳೆಯರಿಗೆ, ಅಂಗವಿಲಕರಿಗೆ, ಪ.ಜಾತಿ ಹಾಗೂ ಪ.ಪಂಗಡದವರಿಗೆ ಉಚಿತ ನ್ಯಾಯ ಒದಗಿಸಲಾಗುವುದು. ರಾಷ್ಟ್ರ ಮಟ್ಟದ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಾಜ್ಯಮಟ್ಟದಲ್ಲಿ ಹೈಕೋರ್ಟ್ ನ್ಯಾಯಾಧೀಶರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನ್ಯಾಯಾಧೀಶರು, ತಾಲೂಕು ಮಟ್ಟದಲ್ಲಿ ತಾಲೂಕು ನ್ಯಾಯಾಲಯದ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ ಎಂದರು.

ಮೂರು ತಿಂಗಳಿಗೊಮ್ಮೆ ಲೋಕ ಅದಾಲತ್ ನಡೆಸಲಾಗುತ್ತದೆ. ಈ ಅದಾಲತ್‌ನಲ್ಲಿ ಕ್ರಿಮಿನಲ್ ಮೊಕದ್ದಮೆಗಳು, ಸಿವಿಲ್ ಪ್ರಕರಣಗಳು, ಚೆಕ್ ಅಮಾನ್ಯೀಕರಣ, ತಾಪಂ, ಗ್ರಾಪಂ ಪಪಂಗಳಲ್ಲಿ ಬಾಕಿ ಇರುವ ತೆರಿಗೆಗಳ ವಸೂಲಾತಿಗಳ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ಲೋಕಅದಾಲತ್‌ನಲ್ಲಿ ರಾಜಿ ಆಗಬಹುದಾದ ವ್ಯಾಜ್ಯಗಳು ಬಗೆಹರಿಯುವುದರಿಂದ ಪ್ರೀತಿ, ವಿಶ್ವಾಸವೂ ಉಳಿಯುತ್ತದೆ. ಗ್ರಾಪಂ ಮಟ್ಟದ ಲೋಕಅದಾಲತ್ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು.

ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಲೋಕ ಅದಾಲತ್‌ನಲ್ಲಿ ಬಾಕಿ ಇರುವ ತೆರಿಗೆಗಳೂ ವಸೂಲಾತಿಯಾಗುವುದರಿಂದ ಗ್ರಾಪಂ ಅಭಿವೃದ್ಧಿಗೂ ಪೂರಕವಾಗಲಿದೆ. ಕಳೆದ ಲೋಕಅದಾಲತ್‌ನಲ್ಲಿ 17 ಲಕ್ಷ ರೂ.ಕಂದಾಯ ವಸೂಲಾಗಿದೆ ಎಂದರು. ವಕೀಲ ಶಿವು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net