ಠೇವಣಿದಾರರನ್ನು ಗೌರವಿಸಬೇಕು

21Jaggu6
ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಸೋಮವಾರ ಲಕ್ಷ್ಮೀತಾಯಿ ಸೌಹಾರ್ದ ಸಹಕಾರ ಸಂಘದ 7ನೇ ಶಾಖೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳ್ಕರ್, ಮಹಾಂತೇಶ ಮತ್ತಿಕೊಪ್ಪ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ: ಠೇವಣಿದಾರರು ಮತ್ತು ಸಾಲಗಾರರನ್ನು ಸಮಾನವಾಗಿ ಗೌರವಿಸಿದಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಎಂ.ಕೆ.ಹುಬ್ಬಳ್ಳಿಯಲ್ಲಿ ಸೋಮವಾರ ಲಕ್ಷ್ಮೀತಾಯಿ ಸೌಹಾರ್ದ ಸಹಕಾರ ಸಂಘದ 7ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆ ಬೆಳೆಯಲು ಠೇವಣಿದಾರರು ಎಷ್ಟು ಮುಖ್ಯವೋ ಸಾಲಗಾರರು ಕೂಡ ಅಷ್ಟೇ ಮುಖ್ಯ. ವಿಶೇಷವಾಗಿ ಮಧ್ಯಮವರ್ಗ ಮತ್ತು ಕೆಳವರ್ಗದವರ ನೆರವಿಗೆ ಸಂಸ್ಥೆ ಮುಂದೆ ಬರಬೇಕು. ರೈತರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಸಹಾಯ ನೀಡಬೇಕು ಎಂದರು. ಸಂಸ್ಥೆಯ ಚೇರ್ಮನ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸಂಸ್ಥೆ ಅತ್ಯಂತ ಅಲ್ಪ ಅವಧಿಯಲ್ಲಿ 26 ಕೋಟಿ ರೂ.ಗಳಿಗಿಂತ ಹೆಚ್ಚಿನ ಠೇವಣಿ ಹೊಂದಿದ್ದು, ಉತ್ತಮ ಬೆಳವಣಿಗೆ ಕಂಡಿದೆ. ವಿಶೇಷವಾಗಿ ರೈತರಿಗೆ ಹೆಚ್ಚಿನ ಸಹಾಯ ನೀಡುತ್ತ ಬಂದಿದೆ. ಎಂ.ಕೆ. ಹುಬ್ಬಳ್ಳಿ ಶಾಖೆ ಕೂಡ ಎಲ್ಲರ ನೆರವಿನಿಂದ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ನಿರ್ದೇಶಕ ಮೃಣಾಲ ಹೆಬ್ಬಾಳ್ಕರ್ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು. ನೂತನ ಶಾಖೆಯಲ್ಲಿ ಆರಂಭಿಕ ಠೇವಣಿ ಇಟ್ಟವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಹಾಗೂ ಶಾಖೆಯ ಸಿಬ್ಬಂದಿ ಇದ್ದರು. ಸಿಇಒ ಸಾಗರ ಇಂಗಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net