

ಚನ್ನರಾಯಪಟ್ಟಣ: ಮಕ್ಕಳು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಯಬೇಕು. ಆಗ ಮಾತ್ರ ತಾವು ಕಲಿತ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಜಿಎಸ್ ಕನ್ವೆನ್‌ಷನ್ ಹಾಲ್‌ನಲ್ಲಿ ಶ್ರೀ ಆದಿಚುಂಚನಗಿರಿ ಸಮೂಹ ಶಿಕ್ಷಣ ಸಂಸ್ಥೆಗಳ ಬಿಜಿಎಸ್ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಿಇಟಿ, ನೀಟ್, ಜೆಇಇ ತರಬೇತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನಾವು ಕಲಿತ ವಿದ್ಯೆ ನಿಂತ ನೀರಾಗದೆ ಹರಿಯುವಂತಾಗಬೇಕು. ಸಂಸ್ಕಾರಯುತ ಶಿಕ್ಷಣದಿಂದ ಬದುಕಿನಲ್ಲಿ ಬದಲಾವಣೆ ಆಗಬೇಕೆ ಹೊರತು ಅದು ಜೀವನವನ್ನು ಬಾಧಿಸುವಂತಾಗಬಾರದು. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಂಠಿತವಾಗುತ್ತಿದೆ. ವಿದ್ಯಾವಂತರನ್ನಾಗಿ ಮಾಡಲು ಕೂಲಿ ಮಾಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿದ ತನ್ನ ತಂದೆ- ತಾಯಿಯನ್ನು ದೂರ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನಾವು ಕಲಿಯುವ ಅವಧಿಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಅಲೆಯಲು ಬಿಟ್ಟರೆ ಮುಂದೆ ಅವರ ಜೀವನ ಪೂರ್ತಿ ಬೀದಿ ಅಲೆಯುವಂತಾಗಬೇಕಾಗುತ್ತದೆ. ಅವನು ಸಾಧನೆ ಮಾಡಿದ್ದಾನೆ ಎಂದು ಅವನ ಮೇಲೆ ಟೀಕಿಸುತ್ತ, ಕಾಲಹರಣ ಮಾಡಿದರೆ ಮುಂದೆ ಜೀವನವಿಡೀ ಮತ್ತೊಬ್ಬರಿಂದ ಟೀಕೆ, ಟಿಪ್ಪಣಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇವಲ ಶಿಕ್ಷಣ ಕಲಿತು ವಿದ್ಯಾವಂತರಾದರೆ ಸಾಲದು, ಸಂಸ್ಕಾರಯುತ ಶಿಕ್ಷಣ ಎಲ್ಲಿ ದೊರೆಯುತ್ತದೋ ಅಲ್ಲಿ ಮೌಲ್ಯಯುತ ಬದುಕು ಸಾಧ್ಯ. ಕೇವಲ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾವಂತರಾಗಬೇಡಿ. ಏನನ್ನಾದರೂ ಸಾಧಿಸುವ ಛಲದೊಂದಿಗೆ ಮುನ್ನುಗ್ಗಬೇಕು. ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಮಗ-ಮಗಳು ಶೇ.100 ಫಲಿತಾಂಶ ತೆಗೆಯಬೇಕು ಎಂದು ಅಂಕದ ಹಿಂದೆ ಹೋಗುತ್ತಿದ್ದಾರೆ. ಜೀವನದಲ್ಲಿ ನಾವು ಯಾವ ರೀತಿ ಸಾಧನೆ ಮಾಡಬೇಕು ಎಂಬ ಧನಾತ್ಮಕ ಚಿಂತನೆ ಇಲ್ಲವಾಗಿದೆ. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕಲು ವಿದ್ಯೆ ಜತೆಗೆ ಇತರರಿಗೆ ಉಪಯೋಗವಾಗುವ ಕೆಲಸ ಮಾಡಬೇಕು. ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವಲ್ಲಿ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯತೆ, ವಿವೇಕವನ್ನು ಮೈಗೂಡಿಸಿಕೊಂಡು ಪಾಲಕರು ಇಟ್ಟಿರುವ ಭರವಸೆ ಹಾಗೂ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೋಜು-ಮಸ್ತಿಗೆ ಬರಬೇಡಿ
ಪಿಯುಸಿ ಹಂತ ವಿದ್ಯಾರ್ಥಿ ಜೀವನದ ನಿರ್ಣಾಯಕ ಹಂತವಾಗಿದೆ. ಇದು ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಡಿಪಾಯ ಹಾಕುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದರೆ, ಅವರು ತಮ್ಮ ಆಯ್ಕೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸುಲಭವಾಗುತ್ತದೆ. ಅಲ್ಲದೆ, ಇದು ಅವರ ವೃತ್ತಿಜೀವನದ ಆಯ್ಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ಗೃಹ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಸಿ.ಜೆ.ಲೋಕೇಶ್ ಬಾಬು ಗೌಡಯ್ಯ ಹೇಳಿದರು.
ಪಿಯು ಘಟ್ಟದಲ್ಲಿ ವಿವಿಧ ಸ್ತರದ ವಿದ್ಯಾರ್ಥಿಗಳು ಕಾಲೇಜುಗಳಿಗೆ ದಾಖಲಾಗುತ್ತಾರೆ. ಅದರಲ್ಲಿ ಕೆಲವರು ಮೋಜು- ಮಸ್ತಿ ಮಾಡುವ ಸಲುವಾಗಿ ಬಂದರೆ, ಮತ್ತೆ ಕೆಲವರು ಜ್ಞಾನಾರ್ಜನೆಗಾಗಿ, ಇನ್ನೂ ಕೆಲವರು ಇತರ ಚಟುವಟಿಕೆಗಳನ್ನು ಚಟವನ್ನಾಗಿ ಮಾಡಿಕೊಳ್ಳುವ ಸಲುವಾಗಿ ಬರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಆಲೋಚನೆ, ಭಾವನೆ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಹೇಮಚಂದ್ರ ಮಾತನಾಡಿ, ಕೇವಲ ನಮ್ಮ ಮಕ್ಕಳು ಡಾಕ್ಟರ್- ಇಂಜಿನಿಯರ್ ಆಗಬೇಕೆಂದು ಪಾಲಕರು ಕನಸು ಕಾಣುತ್ತಾರೆ. ಜತೆಗೆ ಐಎಎಸ್, ಐಪಿಎಸ್ ಎಂಬ ಬಹುದೊಡ್ಡ ಕನಸನ್ನು ಹೊತ್ತು ಮುನ್ನುಗ್ಗಿದಾಗ ಯಶಸ್ಸು ಗಳಿಸಲು ಸಾಧ್ಯ. ಡಿಗ್ರಿಗಳಿಗೆ ಮಾತ್ರ ಸೀಮಿತವಾಗದೆ ಬಹುದೊಡ್ಡ ಕನಸನ್ನು ಹೊಂದಿ ಮುನ್ನಡೆಯಬೇಕು ಎಂದರು. 2024-25ನೇ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಸಿ.ಸಿ.ಕುಮಾರ್ ಇತರರು ಇದ್ದರು.
ವಿದ್ಯಾರ್ಥಿಗಳಲ್ಲಿ ಸದಾಚಾರ, ವಿನಯ, ಶಿಸ್ತು, ಮತ್ತು ಇತರ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಸಹಾಯಕವಾಗುತ್ತದೆ. ಈ ಹಿನ್ನೆಲೆಯಲ್ಲಿ, ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದಕ್ಕೆ ಹೆಚ್ಚಿನ ಗಮನ ಹರಿಸಬೇಕು. ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವುದಲ್ಲದೆ, ಸಮಾಜವನ್ನು ಉತ್ತಮಗೊಳಿಸಲು ಸಹಾಯಕವಾಗುತ್ತದೆ. ಶ್ರೀ ಶಂಭುನಾಥ ಸ್ವಾಮೀಜಿ ಹಾಸನ ಶಾಖಾ ಮಠದ ಕಾರ್ಯದರ್ಶಿ, ಆದಿಚುಂಚನಗಿರಿ ಮಹಾಸಂಸ್ಥಾನ