

ಹಳಿಯಾಳ: ಪುರಾತನ ಕಾಲದಿಂದಲೂ ಗೋವುಗಳಿಗೆ ಪೂಜನೀಯ ಸ್ಥಾನವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೋವುಗಳ ಪಾವಿತ್ರ್ಯೆ ಮತ್ತು ಪ್ರಾಮುಖ್ಯತೆ ಕಡಿಮೆ ಆಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.
ಉ.ಕ. ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ಹಳಿಯಾಳ ತಾಲೂಕಿನ ದುಸಗಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ವಣಗೊಂಡ ಪುಣ್ಯಕೋಟಿ ಸರ್ಕಾರಿ ಗೋಶಾಲೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗೋಶಾಲೆಯಲ್ಲಿ ಕರುಗಳ ಶೆಡ್, ಮೇವಿನ ಸಂಗ್ರಹಣಾ ಯಾರ್ಡ್, ಜಾನುವಾರು ಚಿಕಿತ್ಸೆ ವಿಭಾಗ ಹಾಗೂ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದ್ದು, ಮದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದೊಡ್ಡ ಕೆರೆ, ಸಣ್ಣ ಕೆರೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅರಣ್ಯ ವಲಯದಿಂದ ಗೋಶಾಲೆಯ ಜಾಗದಲ್ಲಿ ವಿವಿಧ ಗಿಡಗಳು, ಇತರೇ ಮೇವಿನ ಬೆಳೆಗಳು ಹಾಗೂ ನವಗ್ರಹವನ ಮತ್ತು ರಾಶಿವನವನ್ನು ಪುಣ್ಯಕೋಟಿ ಗೋಶಾಲೆಯಲ್ಲಿ ನಿರ್ವಿುಸಲಾಗಿದ್ದು ಇದರ ಸದುಪಯೋಗ ಪಡೆದು ಮಾದರಿ ಗೋಶಾಲೆಯನ್ನಾಗಿ ಮಾಡಬೇಕು ಎಂದರು.
ಮದ್ನಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಮೋರೆ, ಉಪಾಧ್ಯಕ್ಷ ಅರ್ಜುನ ಕೆಸರೆಕರ, ತಹಸೀಲ್ದಾರ್ ಜಿ.ಕೆ. ರತ್ನಾಕರ, ಪಶು ಇಲಾಖೆಯ ಉಪನಿರ್ದೇಶಕ ಡಾ. ರಾಕೇಶ ಬಂಗ್ಲೆ, ಹಳಿಯಾಳದ ಸಹಾಯಕ ನಿರ್ದೇಶಕ ಡಾ.ಕೆ.ಎಂ. ನದಾಫ್, ತಾಪಂ ಇಒ ಪರಶುರಾಮ ಘಸ್ತೆ, ಇತರರಿದ್ದರು.