ಶಾಲೆ ಆರಂಭ ನಿರ್ಧಾರ ಸದ್ಯಕ್ಕಿಲ್ಲ : ದೊಡ್ಡಬಳ್ಳಾಪುರದಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

suresh kumar
Published on

ದೊಡ್ಡಬಳ್ಳಾಪುರ : ಶಾಲೆಗಳನ್ನು ಯಾವಾಗ, ಯಾವ ರೀತಿ ಪ್ರಾರಂಭಿಸಬೇಕು ಎಂಬುದನ್ನು ಅಕ್ಟೋಬರ್ ಮೊದಲ ವಾರದಲ್ಲಿ ತೀರ್ಮಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ, ಕೊಂಗಾಡಿಯಪ್ಪ ಪ್ರೌಢಶಾಲೆ, ನಳಂದ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲೆಗಳಲ್ಲಿನ ಪರೀಕ್ಷೆ ಸಿದ್ಧತೆಗಳನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.

ರಾಜ್ಯದಲ್ಲಿ 19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಕಳೆದ ಬಾರಿಗಿಂತ ಈ ಬಾರಿ ಪರೀಕ್ಷಾ ಕೇಂದ್ರ ಮತ್ತು ಕೊಠಡಿ ಹೆಚ್ಚಿಸಲಾಗಿದೆ. ಕಳೆದ ಬಾರಿ 79 ಸಾವಿರ ಪರೀಕ್ಷಾ ಸಿಬ್ಬಂದಿಗಳಿದ್ದರು. ಈ ಬಾರಿ ಅವರ ಸಂಖ್ಯೆಯನ್ನು 1.19 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು. ಈ ಬಾರಿ ಪರೀಕ್ಷಾ ಕೇಂದ್ರಗಳ ಬದಲು ಮಕ್ಕಳ ಸುರಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಕಳೆದ ಬಾರಿ ಪರೀಕ್ಷೆ ಮಾಡಿದಾಗ ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ಶೇ.13.5 ಇತ್ತು. ಈ ಬಾರಿ ಅದು ಶೇ.1.6 ಇದೆ. ಈ ಬಾರಿ ರಾಜ್ಯದಲ್ಲಿ 8.76 ಲಕ್ಷ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಕರಿಗೆ ಭಯ ಬೇಡ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ತೆಗೆದುಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಜ್ಞರು, ಪಾಲಕರು ಮತ್ತು ಶಾಲಾ ಶಿಕ್ಷಕರ ಮೊದಲ ಸಭೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಸಹಮತಿ ಪಡೆದುಕೊಳ್ಳುತ್ತಿದ್ದೇವೆ. ಹೀಗಾಗಿ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಮೂರು ಹಂತಗಳಲ್ಲಿ ವರ್ಗಾವಣೆ: ಶಿಕ್ಷಕರನ್ನು ಮೂರು ಹಂತಗಳಲ್ಲಿ ವರ್ಗಾವಣೆ ಮಾಡಲಾಗುವುದು. ವರ್ಗಾವಣೆ ಬಯಸಿ ಈಗಾಗಲೇ 72 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಹೊಸದಾಗಿ ಅರ್ಜಿ ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ. ಎಲ್ಲ ಅರ್ಜಿಗಳು ಬಂದ ನಂತರದಲ್ಲಿ ವರ್ಗಾವಣೆ ಕುರಿತು ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.

ಸರ್ಕಾರಿ ಶಾಲೆಯಲ್ಲಿ ಸೀಟ್‌ಗೆ ಬೇಡಿಕೆ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಸೀಟು ಕೊಡುವಂತೆ ಸಚಿವ ಸಂಪುಟದ ಸದಸ್ಯರು ಕರೆ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಕರೆ ಮಾಡುವವರಲ್ಲಿ ಐಎಎಸ್ ಅಧಿಕಾರಿಗಳೂ ಸೇರಿದ್ದಾರೆ. ಈ ಹಂತಕ್ಕೆ ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಂಡಿರುವುದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲೂ ತರಗತಿಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಶಾಸಕ ಟಿ.ವೆಂಕಟರಮಣಯ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.

ರಾಜ್ಯದ 14,929 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲೆಲ್ಲಿ ಸಮಸ್ಯೆ ಇದೆಯೋ, ಬಿಇಒ ನೇತೃತ್ವದಲ್ಲಿ ಅವನ್ನು ಪರಿಹರಿಸಿಕೊಳ್ಳಲು ಸಲಹೆ ನೀಡಲಾಗಿದೆ. ವಲಸೆ ವಿದ್ಯಾರ್ಥಿಗಳಿಗೆ ಸಮಸ್ಯೆ ಇದ್ದರೆ ಬಿಇಒ ಅವರನ್ನು ಸಂಪರ್ಕಿಸಬಹುದು. ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸುರೇಶ್ ಕುಮಾರ್, ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net