ವಿವಿಗಳನ್ನು ಮುಚ್ಚುವ ನಿರ್ಧಾರ ಕೈಬಿಡಲಿ

1 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರ ವಿಶ್ವ ವಿದ್ಯಾಲಯಗಳನ್ನು ಬಂದ್​ ಮಾಡುವ ನಿರ್ಧಾರ ಕೈ ಬಿಟ್ಟು ಸೂಕ್ತ ಅನುದಾನ ನೀಡಬೇಕು. ಆರ್ಥಿಕ ನೆಪವೊಡ್ಡಿ ವಿಶ್ವ ವಿದ್ಯಾಲಯಗಳನ್ನು ಬಂದ್​ ಮಾಡುವುದು ಸರಿಯಲ್ಲ. ಒಂದು ವೇಳ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಸುಧೀಂದ್ರ ದೇಶಪಾಂಡೆ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 10 ಹೊಸ ವಿಶ್ವ ವಿದ್ಯಾಲಯಗಳ ಪೈಕಿ 9 ವಿವಿಗಳನ್ನು ಮುಚ್ಚಲು ನಿರ್ಧರಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರ ಗ್ರಾಮೀಣ ಜನರ ಅನುಕೂಲಕ್ಕೆ ಹೊಸ ವಿವಿಗಳನ್ನು ಸ್ಥಾಪಿಸಿತ್ತು. ಆದರೆ ಇದೀಗ ಅನುದಾನದ ಕೊರತೆ ಎಂಬ ಒಂದೇ ಕಾರಣಕ್ಕೆ ಮುಚ್ಚಲು ಮುಂದಾಗಿದ್ದಾರೆ. ಇದರಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ ಎಂದು ದೂರಿದರು.

ವಿವಿಗಳನ್ನು ಕೇವಲ ಆರ್ಥಿಕ ಹೊರೆಯ ದೃಷ್ಟಿಯಿಂದ ಮುಚ್ಚಲು ಮುಂದಾಗಿರುವುದು ಜನವಿರೋಧಿ, ಶಿಕ್ಷಣ ವಿರೋಧಿ ಸರ್ಕಾರದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಹಣ ನೀಡುತ್ತಿರುವ ಸರ್ಕಾರ, ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವ ಉನ್ನತ ಶಿಕ್ಷಣಕ್ಕೆ ಹಣ ನೀಡದಿರುವುದು ರಾಜ್ಯ ಶಿಕ್ಷಣದ ವ್ಯವಸ್ಥೆ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆ ಅಲ್ಲ ಎಂದರು.

ಉನ್ನತ ಶಿಕ್ಷಣ ಎಲ್ಲರಿಗೂ ತಲುಪಲು ಈ ವಿಶ್ವ ವಿದ್ಯಾಲಯಗಳು ಕೆಲಸ ಮಾಡುವಂತೆ ಸರ್ಕಾರ ಅವುಗಳ ನಿರ್ವಹಣೆಗೂ ಅನುದಾನದ ವ್ಯವಸ್ಥೆ ಮಾಡಿ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ನಿಶ್ಚಿತ ಎಂದು ಎಚ್ಚರಿಸಿದರು.

ಡಾ. ವರುಣ ಮೂರ್ತಿ, ಶ್ರೀನಿವಾಸ ಮೂರ್ತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net