

ಹುಣಸೂರು: ತಾಲೂಕಿನ ಉದ್ದೂರು ಕಾವಲ್ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರಾಗದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರು, ಮುಖಂಡರು ಕೈಗೊಂಡಿದ್ದ ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರವನ್ನು ತಾಲೂಕು ಆಡಳಿತ ಮಧ್ಯಪ್ರವೇಶದಿಂದ ಹಿಂಪಡೆದಿದ್ದಾರೆ.
ಗ್ರಾಮದಲ್ಲಿ ಸರ್ಕಾರಿ ಜಾಗ ಇದ್ದರೂ ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಲ್ಲಿ ತಾಲೂಕು ಆಡಳಿತ ವಿಳಂಬ ನೀತಿ ಆನುಸರಿಸುತ್ತಿದೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ಉದ್ದೂರು ಕಾವಲ್ ಗ್ರಾ.ಪಂ. ಸದಸ್ಯರು, ಮುಖಂಡರು ಮತದಾನ ಬಹಿಷ್ಕರಿಸುವುದಾಗಿ ತಾಲೂಕು ಆಡಳಿತಕ್ಕೆ ಎಚ್ಚರಿಸಿದ್ದರು.
ಈ ಕುರಿತು ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ಹಾಗೂ ಸಿಬ್ಬಂದಿ ಶನಿವಾರ ಗ್ರಾ.ಪಂ.ಗೆ ಭೇಟಿ ನೀಡಿ ಸಭೆ ನಡೆಸಿದರು. ಈ ವೇಳೆ ಸದಸ್ಯರು, ಮುಖಂಡರೊಂದಿಗೆ ಮಾತನಾಡಿದ ಮಹಮ್ಮದ್ ಹ್ಯಾರಿಸ್ ಸುಮೇರ್, ಗ್ರಾ.ಪಂ.ಕಟ್ಟಡ ನಿರ್ಮಾಣಕ್ಕಾಗಿ ಉದ್ದೂರು ಕಾವಲ್ ಸರ್ವೇ ನಂ.995ರಲ್ಲಿ 15 ಗುಂಟೆ ಜಮೀನನ್ನು ಕಾಯ್ದಿರಿಸುವ ಸಂಬಂಧ ಈಗಾಗಲೇ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಅನುಮೋದನೆ ದೊರೆತ ಕೂಡಲೇ ಸಂಬಂಧಪಟ್ಟ ಆರ್‌ಟಿಸಿ ಇಂಡೀಕರಣಗೊಳಿಸಿ ಗ್ರಾ.ಪಂ.ಗೆ ನಿವೇಶನ ಹಸ್ತಾಂತರಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ನಿಮ್ಮೆಲ್ಲರ ಹಕ್ಕು. ಹಕ್ಕು ಚಲಾವಣೆಯಿಂದ ಹಿಂದೆ ಸರಿಯುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಹಾಗಾಗಿ ಎಲ್ಲ ಸದಸ್ಯರು, ಗ್ರಾಮದ ಮುಖಂಡರು ಮತದಾನ ಬಹಿಷ್ಕಾರ ನಿರ್ಧಾರ ಹಿಂಪಡೆದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವೊಲಿಸಿದರು. ಇದಕ್ಕೆ ಸದಸ್ಯರು ಹಾಗೂ ಮುಖಂಡರು ಸಮ್ಮತಿಸಿದರು.
ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮುಬಾರಕ್ ಬಾನು, ಉಪಾಧ್ಯಕ್ಷೆ ಪದ್ಮಮ್ಮ ನಾರಾಯಣಗೌಡ, ಸದಸ್ಯರಾದ ರಾಮಬೋವಿ, ವಿಜೇಂದ್ರಕುಮಾರ್, ಶಾಂತಿ, ತಹಸೀಲ್ದಾರ್ ಎಂ.ನಯನಾ, ಪಿಡಿಒ ಅರುಣ್, ಇತರ ಸಿಬ್ಬಂದಿ ಇದ್ದರು.