ಜೀವನದ ಕೊನೆವರೆಗೂ ಕ್ಷೇತ್ರದ ಜನರ ಋಣ ಮರೆಯಲ್ಲ

Dhanyavad Yatre
Published on

ಶಿಗ್ಗಾಂವಿ: ಶಿಗ್ಗಾಂವಿ-ಸವಣೂರು ಕ್ಷೇತ್ರ ನನ್ನ ತವರು. ನನಗೆ ರಾಜಕೀಯವಾಗಿ ಎರಡನೇ ಜನ್ಮ ನೀಡಿದ ಕ್ಷೇತ್ರ ಇದು. ನನ್ನ ಜೀವನದ ಕೊನೆವರೆಗೂ ಕ್ಷೇತ್ರದ ಜನರ ಋಣ ಮರೆಯುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಕ್ಷೇತ್ರದ ಶೀಲವಂತ ಸೋಮಾಪುರ, ದುಂಡಸಿ, ಅ.ಮ.ಕೊಪ್ಪ, ಅರಟಾಳ ತಾಂಡಾ, ಹೊಸೂರು ಯತ್ನಳ್ಳಿ, ತಾಂಡಾ, ಜಕ್ಕನಕಟ್ಟಿ ಗ್ರಾಮಗಳಲ್ಲಿ ಶನಿವಾರ ಏರ್ಪಡಿಸಿದ್ದ ಧನ್ಯವಾದ ಯಾತ್ರೆಯಲ್ಲಿ ಅವರು ಮಾತನಾಡಿದರು.

ನಾನು ಬಿಜೆಪಿ ಸೇರಿದಾಗ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ಪ್ರಶ್ನೆ ಬಂದಾಗ ನಾನು ಧಾರವಾಡ ಅಥವಾ ಕುಂದಗೋಳದಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದೆ. ಆದರೆ, ಬಿಜೆಪಿ ವರಿಷ್ಠರು ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರು. ನಾನು ಐದು ನಿಮಿಷ ಯೋಚನೆ ಮಾಡಿ, ವಿಧಾನ ಪರಿಷತ್ ಸದಸ್ಯನಾಗಿ ಹನ್ನೆರಡು ವರ್ಷ ಸೇವೆ ಮಾಡಿದ್ದು ನೆನಪಿಸಿಕೊಂಡು ಇಲ್ಲಿ ಸ್ಪರ್ಧಿಸಲು ಒಪ್ಪಿಕೊಂಡೆ ಎಂದರು.

ನಿಮ್ಮ ಆಶೀರ್ವಾದವೇ ದೊಡ್ಡ ಶಕ್ತಿ: ಕಳೆದ ವರ್ಷ ಅಭೂತಪೂರ್ವ ಬೆಂಬಲದೊಂದಿಗೆ ಐದು ವರ್ಷಕ್ಕೆ ಶಾಸಕನಾಗಿ ಮಾಡಿದ್ದೀರಿ. ಬಳಿಕ ಸಂಸತ್ತಿಗೆ ಹೋಗುವ ಅವಕಾಶ ದೊರಕಿಸಿ ಕೊಟ್ಟಿರಿ. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ. ನೀವು ಒಂದು ಸಾರಿ ಬಟನ್ ಒತ್ತಿದರೆ ನಾನು ಕೇವಲ ಶಾಸಕನಲ್ಲ ಮಂತ್ರಿಯಾಗಿ ಬರುತ್ತಿದ್ದೆ. ಅಂತಹ ಶಕ್ತಿ ಶಿಗ್ಗಾಂವಿ- ಸವಣೂರ ಕ್ಷೇತ್ರದ ಜನತೆಗಿದೆ ಎಂದರು.

ನೀವು ಕೊಟ್ಟ ಅವಕಾಶದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ದೊರೆಯಿತು. ಮುಖ್ಯಮಂತ್ರಿಯಾಗಿ ಎರಡು ವರ್ಷದ ಅಧಿಕಾರದಲ್ಲಿದ್ದಾಗ ರೈತರಿಗೆ ಐದು ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದ ಸಾಲ, ಯಶಸ್ವಿನಿ ಯೋಜನೆ ಮರು ಸ್ಥಾಪನೆ, ರೈತರ ಮಕ್ಕಳಿಗೆ ವಿದ್ಯಾನಿಧಿ ಸೇರಿ ಹಲವಾರು ಯೋಜನೆ ಜಾರಿ ಮಾಡಲು ಸಾಧ್ಯವಾಯಿತು ಎಂದರು.

ನೀರಾವರಿ ಯೋಜನೆ, ದಾಖಲೆ ಪ್ರಮಾಣದ ಮನೆಗಳ ನಿರ್ಮಾಣ ಕೆಲಸ ಮಾಡಿದೆ. ಎಲ್ಲ ತಾಲೂಕುಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ 9 ಸಾವಿರ ಕೊಠಡಿ ನಿರ್ಮಾಣ ಮಾಡಲು ತೀರ್ಮಾನಿಸಿ, 4 ಸಾವಿರ ಕೊಠಡಿ ಪೂರ್ಣಗೊಳಿಸಿದೆ. ಈ ವರ್ಷ ಬರಗಾಲ ಇದ್ದರೂ ರೈತರಿಗೆ ಬೆಳೆ ವಿಮೆ ಬಂದಿಲ್ಲ. ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಹೋರಾಟ ಮಾಡಿಯಾದರೂ ವಿಮೆ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಅತ್ಯಂತ ದೊಡ್ಡ ಕ್ಷೇತ್ರ. ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ನಾನು ಶಿಗ್ಗಾಂವಿ-ಸವಣೂರು ಸೇರಿ 9 ವಿಧಾನಸಭಾ ಕ್ಷೇತ್ರಗಳಿವೆ ಎಂದು ತಿಳಿದಿದ್ದೇನೆ. ನಿಮ್ಮ ಸಹೋದರ ದೆಹಲಿಯಲ್ಲಿ ಇದ್ದಾನೆ ಎಂದು ಮೊದಲಿನಂತೆಯೇ ಬಂದು ಕೆಲಸ ಮಾಡಿಸಿಕೊಂಡು ಹೋಗಿ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣನವರ, ಶಶಿಧರ ಎಲಿಗಾರ, ಶಿವಪ್ರಸಾದ ಸುರಗಿಮಠ, ಶಶಿಧರ ಹೊನ್ನಣ್ಣನವರ, ಗಂಗಣ್ಣ ಸಾತಣ್ಣನವರ, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net