ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಸಾವು

fish boat
Published on

ಹೊನ್ನಾವರ: ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನೇ ನಂಬಿದ್ದ ಇಬ್ಬರು ಮೀನುಗಾರರು ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಮಂಕಿ ಹಾಗೂ ಮುಗ್ವಾ ತನ್ಮಡಗಿಯಲ್ಲಿ ಬುಧವಾರ ಸಂಭವಿಸಿದೆ.
ತಾಲೂಕಿನ ಮಂಕಿ ಮಡಿಯಿಂದ ಮೀನುಗಾರಿಕೆಗೆ ತೆರಳಿದ್ದ ಗಣಪತಿ ನಾಗಪ್ಪ ಖಾರ್ವಿ (51) ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ದೋಣಿಯಲ್ಲಿ ಕುಸಿದು ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ಸಂಬಂಧಿಗಳಾದ ದೇವರಾಜ ಮಂಜುನಾಥ ಖಾರ್ವಿ ಹಾಗೂ ಸಂಜಯ ಈಶ್ವರ ಖಾರ್ವಿ ಅವರೊಂದಿಗೆ ನಾಡದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.
ಸಮುದ್ರದಲ್ಲಿ ಬಲೆ ಬೀಡುವ ಸಂದರ್ಭದಲ್ಲಿ ಗಣಪತಿ ನಾಗಪ್ಪ ಖಾರ್ವಿ ಕುಸಿದು ಮೃತಪಟ್ಟಿದ್ದಾನೆ. ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ಮುಗ್ವಾ ತನ್ಮಡಗಿಯಲ್ಲಿ ಮಂಜುನಾಥ ಗಣೇಶ ಅಂಬಿಗ ಅವರು ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಮುಂಜಾನೆ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಜೊತೆಯಲ್ಲಿ ತಮ್ಮ ಬಾವನೊಂದಿಗೆ ಮೀನು ಹಿಡಿಯಲು ಹೋದಾಗ ಆಕಸ್ಮಿಕವಾಗಿ ನೀರಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net