

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ.
ಮನಗೂಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಹೀಂದ್ರಾ ಎಸ್ಯುವಿ 300 ಕಾರಿನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಮತ್ತು ಲಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಎಸ್ಯುವಿ ಕಾರಿನಲ್ಲಿದ್ದ ತೆಲಂಗಾಣದ ಗಡವಾಲ ಮೂಲದ, ಸದ್ಯ ವಿಜಯಪುರದ ಹೊರ್ತಿಯ ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ಟಿ. ಭಾಸ್ಕರನ್ (36) ಹಾಗೂ ಅವರ ಪತ್ನಿ ಪವಿತ್ರಾ (34), ಮಗಳು ಜೋತ್ಸ್ನಾ (12), ಸ್ಕಾರ್ಪಿಯೋ ಚಾಲಕ ವಿಜಯಪುರ ಜಿಲ್ಲೆಯ ಹೊರ್ತಿಯ ವಿಕಾಸ ಶಿವಪ್ಪ ಮಕನಿ (29) ಹಾಗೂ ಖಾಸಗಿ ಬಸ್ ಚಾಲಕ ಕಲಗುಟಗಿ ತಾಂಡಾದ ಬಸವರಾಜ ರಾಠೋಡ (48) ಸ್ಥಳದಲ್ಲೆ ಅಸುನೀಗಿದ್ದಾರೆ.
ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ಭಾಸ್ಕರನ್ ಅವರ ಪುತ್ರ ಪ್ರವಿಣತೇಜ ಹಾಗೂ ಲಾರಿ ಚಾಲಕ ಹುಲಜಂತಿಯ ಚನ್ನಬಸು ಸಿದ್ದಪ್ಪ ಮಾಳಿ ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಟನೆ ವಿವರ ಸೋಲಾಪುರ ಕಡೆಗೆ ತೆರಳುತ್ತಿದ್ದ ಮಹೀಂದ್ರಾ ಎಸ್ಯುವಿ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ಗೆ ಡಿಕ್ಕಿ ಹೊಡೆದು ಹಾರಿ, ಮುಂಬೈನಿಂದ ಬಳ್ಳಾರಿಗೆ ತೆರಳುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಐವರು ಹಾಗೂ ಬಸ್ ಚಾಲಕ ಸ್ಥಳದಲ್ಲೆ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಅಪಘಾತದಲ್ಲಿ ನುಜ್ಜುಗುಜ್ಜಾಗಿದ್ದ ವಾಹನಗಳಲ್ಲಿ ಸಿಲುಕಿದ ಶವಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.
ಮಹೀಂದ್ರ ಕಾರಿನ ಚಾಲಕನ ನಿದ್ದೆಯ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕಾರಿನಲ್ಲಿದ್ದವರೆಲ್ಲರೂ ತೀರ್ಥ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು, ವಾಪಸ್ ಬರುವಾಗ ಈ ದುರ್ಟನೆ ನಡೆದಿದೆ.
ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗಾಯಾಳು ಮಗುವಿನ ಆರೋಗ್ಯ ವಿಚಾರಿಸಿದ ಸಚಿವ ಶಿವಾನಂದ ಪಾಟೀಲ: ಮನಗೂಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಹೆತ್ತವರು ಸೇರಿ ಇಡೀ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲಂಗಾಣ ಮೂಲದ ಬಾಲಕ ಪ್ರವಿಣತೇಜನ ಆರೋಗ್ಯದ ಕುರಿತು ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿಚಾರಿಸಿದರು. ಮಗುವಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಸ್ಪತ್ರೆಯ ಶಸಚಿಕಿತ್ಸಕರಿಗೆ ಸೂಚಿಸಿದರು. ಅಪಘಾತದ ಸುದ್ದಿ ತಿಳಿದ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಗಾಯಾಳು ಮಗುವಿನ ಆರೋಗ್ಯದ ಕುರಿತು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮತ್ತು ಚಿಕಿತ್ಸೆ ನೀಡಿದ ಮಕ್ಕಳ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲಿದ್ದ ಮೃತ ಭಾಸ್ಕರನ್ ಸ್ನೇಹಿತರು ಮಗುವಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂದು ಆರೋಪಿಸಿದ ಹಿನ್ನೆಲೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದರು. ಮೃತರ ಕುಟುಂಬದವರಿಗೆ ಸಂತಾಪ ವ್ಯಕ್ತಪಡಿಸಿದ ಸಚಿವರು, ಮೃತರ ಶವಗಳನ್ನು ತ್ವರಿತವಾಗಿ ವೈದ್ಯಕಿಯ ಪರೀಕ್ಷೆ ನಡೆಸಿ, ಮೃತರ ಸ್ವಗ್ರಾಮ ತೆಲಂಗಾಣದ ಗದ್ವಾಲ್ಗೆ ಮತ್ತು ಇತರರ ಶವಗಳನ್ನು ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.