

ಬೆಂಗಳೂರು: ನಗರದ ಎಲ್ಲ ರಸ್ತೆಗುಂಡಿಗಳ ಸರ್ವೆಯನ್ನು ಮಾ.31ರೊಳಗೆ ನಡೆಸಿ, ಹಂತಹಂತವಾಗಿ ಮುಚ್ಚಿ ದುರುಸ್ತಿಗೊಳಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಗುರುವಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಲ್ಲದೆ, ರಸ್ತೆಗಳ ಗುಂಡಿ ಮುಚ್ಚುವ ಮತ್ತು ದುರಸ್ತಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಐಐಎಸ್ಸಿ ತಜ್ಞರ ನೇಮಿಸಲು ಸೂಚಿಸಿದೆ.
‘ಗುಂಡಿರಹಿತ ಉತ್ತಮ ರಸ್ತೆ’ ಹೊಂದುವುದು ಪ್ರಜೆಗಳ ಮೂಲಭೂತ ಹಕ್ಕು ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಅದನ್ನು ಒದಗಿಸಬೇಕಾದದ್ದು ಪಾಲಿಕೆಯ ಸಾಂವಿಧಾನಿಕ ಕರ್ತವ್ಯ ಎಂದು ಹೇಳಿದೆ. ರಸ್ತೆ ದುಸ್ಥಿತಿ ಕುರಿತು ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ಮತ್ತು ನ್ಯಾ. ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠ ವಿವರವಾದ ಆದೇಶ ನೀಡಿದೆ.
ವರದಿ ಸಲ್ಲಿಸಬೇಕು: ರಸ್ತೆ ದುರಸ್ತಿ, ಗುಂಡಿ ಮುಚ್ಚುವ ಕುರಿತು ಈವರೆಗೆ ಹೈಕೋರ್ಟ್ ನೀಡಿರುವ ಎಲ್ಲ ಆದೇಶಗಳನ್ನು ಪಾಲಿಸಿರುವ ಬಗ್ಗೆ ಮಾ. 31ರೊಳಗೆ ಕಾರ್ಯಪಾಲನಾ ವರದಿ ಸಲ್ಲಿಸಬೇಕು. ಇಲ್ಲವಾದರೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಗುಣಮಟ್ಟ ಪರಿಶೀಲನೆಗೆ ಸೂಚನೆ: ‘ರಸ್ತೆಗಳ ಗುಣಮಟ್ಟ ಪರಿಶೀಲಿಸಲು 2 ವಾರದಲ್ಲಿ ಐಐಎಸ್ಸಿ ತಜ್ಞರನ್ನು ನೇಮಕ ಮಾಡಬೇಕು. ಈ ಸಮಿತಿ ಮೊದಲಿಗೆ ಗುಂಡಿಮುಕ್ತವಾಗಿದೆ ಎಂದು ಹೇಳಲಾಗಿರುವ 74 ರಸ್ತೆಗಳನ್ನು ಪರಿಶೀಲಿಸಬೇಕು. ಆನಂತರ ಇತರೆ ರಸ್ತೆ ಪರಿಶೀಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಮೇಯರ್ ಮತ್ತಿತರರಿಗೆ ನೋಟಿಸ್
ರಸ್ತೆ ಗುಂಡಿಗಳಿಂದ ಗಾಯಗೊಂಡವರಿಗೆ ಮತ್ತು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಆದೇಶ ಪಾಲನೆ ಮಾಡದಿರುವ ಬಗ್ಗೆ ಸಭೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರ್, ಉಪಮೇಯರ್, ಆಡಳಿತಪಕ್ಷದ ನಾಯಕ, ಪ್ರತಿಪಕ್ಷದ ನಾಯಕರಿಗೆ ನ್ಯಾಯಪೀಠ ನೋಟಿಸ್ ನೀಡಿದೆ. ಮಾ.16ರೊಳಗೆ ಅಫಿಡವಿಟ್ ಅಥವಾ ವರದಿ ಸಲ್ಲಿಸಿ, ಆಯುಕ್ತರು ಹಿಂದೆ ಪ್ರಮಾಣಪತ್ರದಲ್ಲಿ ತಿಳಿಸಿದ್ದಂತೆ ಸಭೆ ನಡೆಸಿರುವುದನ್ನು ಸ್ಪಷ್ಟಪಡಿಸಬೇಕು ಎಂದು ಆದೇಶಿಸಿದೆ.
ಸಹಾಯ್ಗೆ ಹೆಚ್ಚಿನ ಪ್ರಚಾರ ನೀಡಿ
ರಸ್ತೆಗುಂಡಿ ಮತ್ತಿತರ ದೂರುಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ಸಹಾಯ್ ಆಪ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹೆಚ್ಚಿನ ಪ್ರಚಾರ ನೀಡಬೇಕು. ಅದಕ್ಕಾಗಿ ಕಡಿಮೆ ವೆಚ್ಚದ ವಿನೂತನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ. ಬಿಬಿಎಂಪಿ ರಸ್ತೆಗಳ ದುರಸ್ತಿಗೆ ಖರ್ಚು ಮಾಡುವ ಹಣಕ್ಕೆ ಹೋಲಿಸಿದರೆ, ಪ್ರಚಾರಕ್ಕೆ ವ್ಯಯ ಮಾಡುವ ಹಣ ತೀರಾ ಕಡಿಮೆ ಎಂದು ಸಿಜೆ ಹೇಳಿದ್ದಾರೆ.