

ಬೆಂಗಳೂರು: ಮಹಾನಗರದಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ನಿರತವಾಗಿರುವ ಬಿಬಿಎಂಪಿ, ಶುಕ್ರವಾರದೊಳಗೆ (ಸೆ.20) ಎಲ್ಲೆಡೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.
ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಕೈಗೊಂಡಿದ್ದ ವೇಳೆ ಕಾಲಮಿತಿಯೊಳಗೆ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಜತೆಗೆ ಡಿಸಿಎಂ ಕೂಡ ಅಮೆರಿಕ ಪ್ರವಾಸಕ್ಕೆ ತೆರಳುವ ಮುನ್ನ ಗಡುವಿನೊಳಗೆ ಗುಂಡಿಗಳಿಗೆ ಮುಕ್ತಿ ನೀಡುವಂತೆ ನಿರ್ದೇಶಿಸಿದ್ದರು. ಈವರೆಗೆ ಪ್ರಮುಖ ರಸ್ತೆಗಳಲ್ಲಿ 3,000 ಗುಂಡಿಗಳನ್ನು ಮುಚ್ಚಿದ್ದು, ಇನ್ನೂ 1 ಸಾವಿರ ಬಾಕಿ ಇವೆ.
ಭಾನುವಾರ ರಜಾದಿನವಿದ್ದರೂ ದಾಸರಹಳ್ಳಿ ವಲಯದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲಾಯಿತು. ಸ್ವತ: ವಲಯ ಆಯುಕ್ತ, ಉಪ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಗುಂಡಿ ಮುಚ್ಚುವ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ವಲಯ ಆಯುಕ್ತ ಗಿರೀಶ್, ಡಿಸಿಎಂ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ದಾಸರಹಳ್ಳಿ ವಲಯದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಚಿಕ್ಕ ವಲಯವಾಗಿರುವ ದಾಸರಹಳ್ಳಿ 27.82 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಆದರೂ, ಬಹಳಷ್ಟು ಗುಂಡಿಗಳು ಉಂಟಾಗಿದ್ದು, ಅವುಗಳನ್ನು ಮುಚ್ಚುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದರು.
ನಾಗರಿಕರ ದೂರಿಗೂ ಸ್ಪಂದನೆ:
ದಾಸರಹಳ್ಳಿ ವಲಯದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುಲು ಅಂದಾಜು 20 ಲೋಡ್ ಡಾಂಬರಿನ ಅವಶ್ಯಕತೆ ಇದೆ. ರಸ್ತೆಗುಂಡಿ ಗಮನ ತಂತ್ರಾಂಶದಲ್ಲಿ ಬರುವ ನಾಗರಿಕರ ದೂರುಗಳು ಹಾಗೂ ಇಂಜಿನಿಯರ್‌ಗಳು ಗುರುತಿಸುವ ರಸ್ತೆಗುಂಡಿಗಳನ್ನು ಶೀಘ್ರ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ಸೇರಿ ಒಟ್ಟು 46.62 ಕಿ.ಮೀ. ಪ್ರಮುಖ ರಸ್ತೆಗಳಿದ್ದು, ಬಹುತೇಖ ಗುಂಡಿಗಳನ್ನು ಮುಚ್ಚಲಾಗಿದೆ. ವಿವಿಧ ಇಲಾಖೆಗಳು ಕೈಗೊಂಡಿರುವ ಕಾಮಗಾರಿಯಿಂದ ಉಂಟಾಗಿರುವ ರಸ್ತೆ ಅಗೆತದ ಭಾಗವನ್ನು ಆಯಾ ಇಲಾಖೆಗಳಿಂದ ಮುಚ್ಚಿಸುವ ಉಪಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗಿರೀಶ್ ವಿವರಿಸಿದರು.
ಈ ವೇಳೆ ವಲಯ ಜಂಟಿ ಆಯುಕ್ತೆ ಪಲ್ಲವಿ, ಮುಖ್ಯ ಅಭಿಯಂತರ ರವಿ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ದಾಸರಹಳ್ಳಿ ವಲಯದ ರಸ್ತೆಗಳ ವಿವರ:
* ವಾರ್ಡ್ ರಸ್ತೆಗಳ ಸಂಖ್ಯೆ: 4,432
* ವಾರ್ಡ್ ರಸ್ತೆಗಳ ಉದ್ದ: 607.53 ಕಿ.ಮೀ.
* ಪ್ರಮುಖ ರಸ್ತೆಗಳ ಸಂಖ್ಯೆ: 19
* ಪ್ರಮುಖ ರಸ್ತೆಗಳ ಉದ್ದ: 46.62 ಕಿ.ಮೀ.
* ವಲಯ ರಸ್ತೆಗಳ ಒಟ್ಟು ಉದ್ದ: 654.87 ಕಿ.ಮೀ.