

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಇಂಧನ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ. ಒಂದೇ ವಿಶ್ವ- ಒಬ್ಬನೇ ಸೂರ್ಯ- ಒಂದೇ ವಿದ್ಯುತ್ ಗ್ರಿಡ್ ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್ ಉತ್ಪಾದನೆಯೆಡೆಗೆ ಪರಸ್ಪರ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಗ್ರೀನಲ್ಯಾಂಡ್ ಬಯೋಟೆಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಜಾಬಶೆಟ್ಟಿ ಹೇಳಿದರು.
ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ವಿಭಾಗ ಏರ್ಪಡಿಸಿದ್ದ ಸೌರ ಘರ: ಮುಫ್ತ ಬಿಜಲಿ ಯೋಜನೆಯ ಅಳವಡಿಕೆಯ ಸಾಧಕ ಬಾಧಕಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತವು ಹೊಸ ಮೈಲಿಗಲ್ಲು ಸ್ಥಾಪಿಸುದರೆಡೆಗೆ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವುದು ಎಂದರು.
ಶಕ್ತಿನಗರದ ಕ್ಯಾಶುಟೆಕ್ ನಿರ್ವಿುತಿ ಕೇಂದ್ರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶರಣಬಸಪ್ಪಾ ಪಟ್ಟೇದ ಕಾರ್ಯಾಗಾರದ ಉದ್ದೇಶ ವಿವರಿಸಿದರು.
ವಿವಿಯ ಸಿವಿಲ್ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಸಂತ ಪಾಲನಕರ, ಸುರೇಶ ಕಿರೇಸೂರ ಇದ್ದರು. ಪೊ›. ದರ್ಶನ ಹಲ್ಯಾಳ ನಿರೂಪಿಸಿದರು. ಪೊ›. ಪಂಡಿತಾರಾಧ್ಯ ವಂದಿಸಿದರು.