

ಕಾರವಾರ:ನಿಕಟಪೂರ್ವ ಅಧ್ಯಕ್ಷರು, ಕೆಲ ಸದಸ್ಯರು ಹಾಗೂ ಪಿಡಿಒ ಸೇರಿ ಗ್ರಾಪಂ ಕಚೇರಿಯಲ್ಲಿ ರಾತ್ರಿ ಕುಳಿತು ಆಗದ ಕಾಮಗಾರಿಗಳಿಗೆ ಚೆಕ್ ಬರೆಯುತ್ತಿದ್ದರು ಎಂದು ಆರೋಪಿಸಿರುವ ನೂತನ ಅಧ್ಯಕ್ಷ ಗ್ರಾಪಂಗೆ ಬೀಗ ಹಾಕಿ, ಪೊಲೀಸ್ ಕಾವಲಿರಿಸಿದ ಘಟನೆ ಶುಕ್ರವಾರ ಚಿತ್ತಾಕುಲಾದಲ್ಲಿ ನಡೆದಿದೆ. ಈ ಸಂಬಂಧ ಹಾಲಿ ಹಾಗೂ ಮಾಜಿಗಳ ನಡುವೆ ಆಣೆ, ಪ್ರಮಾಣದ ವಾಗ್ಯುದ್ದ ಪ್ರಾರಂಭವಾಗಿದೆ.
ಜಿಲ್ಲೆಯ ಅತಿ ದೊಡ್ಡ ಗ್ರಾಪಂಗಳಲ್ಲಿ ಒಂದಾದ 36 ಸದಸ್ಯ ಬದಲ ಚಿತ್ತಾಕುಲಾ ಗ್ರಾಪಂನಲ್ಲಿ ಶುಕ್ರವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಕಾಂಗ್ರೆಸ್ನ ರಾಜು ತಾಂಡೇಲ 19 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯ ಸೂರಜ್ ದೇಸಾಯಿ 22 ಮತ ಪಡೆದು, ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಶುಕ್ರವಾರ ರಾತ್ರಿ ಗ್ರಾಪಂ ಪಿಡಿಒ ರಾಜೇಶ ನಾಯ್ಕ, ನಿಕಟಪೂರ್ವ ಅಧ್ಯಕ್ಷೆ ಹಾಗೂ ನೂತನ ಉಪಾಧ್ಯಕ್ಷರ ಪತ್ನಿ ಸ್ವಾತಿ ದೇಸಾಯಿ ಹಾಗೂ ಇತರ ಕೆಲ ಸದಸ್ಯರು ರಾತ್ರಿ ಕುಳಿತು ಚೆಕ್ಗಳನ್ನು ಬರೆಯುತ್ತಿದ್ದರು ಎಂದು ನೂತನ ಅಧ್ಯಕ್ಷ ರಾಜು ತಾಂಡೇಲ ಆರೋಪಿಸಿದ್ದಾರೆ. ಅದೂ ಪಿಡಿಒ ರಾಜೇಶ ನಾಯ್ಕ ಈಗಾಗಲೇ ವರ್ಗಾವಣೆಯಾಗಿದ್ದಾರೆ.
ಹೀಗಿರುವಾಗ ಅವರು ಇಂಥ ಕಾರ್ಯ ಮಾಡುವುದು ಸರಿಯಲ್ಲ. ಹಿಂದಿನ ಅಽಕಾರಾವಽಯ ಕಾಮಗಾರಿಗಳ ಚೆಕ್ಗಳನ್ನು ಅವಧಿ ಮುಗಿಯುವ ಮೊದಲೇ ಬರೆಯಬೇಕಿತ್ತು. ಹೊಸ ಅಧ್ಯಕ್ಷರ ಆಯ್ಕೆಯಾದ ನಂತರ ರಾತ್ರೋ ರಾತ್ರಿ ಕೆಲಸ ಮಾಡುವುದು ಸರಿಯಲ್ಲ ಎಂದು ರಾಜು ತಾಂಡೇಲ ತಿಳಿಸಿದ್ದಾರೆ.
ಮಾತ್ರವಲ್ಲ ಗ್ರಾಪಂ ಕಚೇರಿಗೆ ಬೀಗ ಹಾಕಿದ್ದು, ಪೊಲೀಸರನ್ನು ಕಾವಲಿರಿಸಿದ್ದಾರೆ. ಈ ಕುರಿತು ಸಂಫೂರ್ಣ ತನಿಖೆ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದು, ಅವರು ಬಂದು ಪರಿಶೀಲನೆ ನಡೆಸುವವರೆಗೆ ಬಾಗಿಲು ತೆರೆಯಲು ಬಿಡುವುದಿಲ್ಲ. ಬಾಗಿಲಲ್ಲೇ ಧರಣಿ ಕೂರುತ್ತೇನೆ ಎಂದು ಆರೋಪಿಸಿದ್ದಾರೆ.
ಆಣೆ, ಪ್ರಮಾಣ:
ಈ ಘಟನೆ ಬಗ್ಗೆ ಶನಿವಾರ ಎರಡು ಬಣಗಳ ನಡುವೆ ವಾಗ್ಯುದ್ಧ ಪ್ರಾರಂಭವಾಗಿದೆ. ಶಿವಾಜಿ ಬಾಯ್ಸ್ ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಎರಡು ಬಣಗಳ ಸದಸ್ಯರು ವೈಸ್ ಮೆಸೇಜ್ ಹರಿಬಿಡುತ್ತಿದ್ದಾರೆ. `ಎಂಥ ಕಳ್ಳರಿದ್ದಾರೆ. ನೋಡಿ. ರಾತ್ರಿ ಪಿಡಿಒ ಏಕೆ ಚೆಕ್ ಬರೆಯುತ್ತಿದ್ದಾರೆ..?' ಎಂದು ಗ್ರೂಪ್ನ ಸದಸ್ಯರೊಬ್ಬರು ವೈಸ್ ಮೆಸೇಜ್ ಕಳಿಸಿದ್ದಾರೆ.
ಅದಕ್ಕೆ ಸ್ವಾತಿ ದೇಸಾಯಿ ಅವರು ಪ್ರತ್ಯುತ್ತರ ನೀಡಿದ್ದು, "ನಾನು ಎರಡುವರೆ ವರ್ಷ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಮಹಿಳೆಯೊಬ್ಬಳ ಮೇಲೆ ವಿನಾ ಕಾರಣ ಆರೋಪ ಹೊರಿಸುವವರನ್ನು ಮಹಾಮಾಯಾ ದೇವಿ ಸುಮ್ಮನೆ ಬಿಡುವುದಿಲ್ಲ. ಮಹಾಮಾಯಾ ದೇವಸ್ಥಾನಕ್ಕೆ ಬರಲಿ ಪ್ರಮಾಣ ಮಾಡಲಿ, ನಾನೂ ಮಾಡುತ್ತೇನೆ" ಎಂದು ಆಹ್ವಾನಿಸಿದ್ದಾರೆ.
ಎರಡುವರೆ ವರ್ಷದಲ್ಲಿ ಹೈಟೆಕ್ ಸಭಾಭವನ ಕಟ್ಟಿದ್ದೇವೆ. ಜಿಲ್ಲೆಯ ಮೊದಲ ಡಿಜಿಟಲ್ ಲೈಬ್ರರಿ ಮಾಡಿದ್ದೇವೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರಿಂದ ಜಿಲ್ಲೆಯಲ್ಲಿ ನಮ್ಮ ಗ್ರಾಪಂ ಮೊದಲ ಸ್ಥಾನದಲ್ಲಿದೆ. ಜಿಪಂ ಸಿಇಒ ಅಥವಾ ಯಾರೇ ಬಂದು ಎಲ್ಲ ದಾಖಲೆ ಪರಿಶೀಲನೆ ಮಾಡಲಿ. ಈಗ ಎಲ್ಲವೂ ಡಿಜಿಟಲ್ ಪೇಮೆಂಟ್ ಪದ್ಧತಿಯಲ್ಲಾಗುತ್ತದೆ. ನಯಾ ಪೈಸೆ ಅಕ್ರಮ ನಡೆದಿಲ್ಲ. ನಡೆಯಲು ಸಾಧ್ಯವಿಲ್ಲ.ಸ್ವಾತಿ ದೇಸಾಯಿಚಿತ್ತಾಕುಲಾ ಗ್ರಾಪಂ ನಿಕಟಪೂರ್ವ ಪಿಡಿಒ