ವೃದ್ಧ ದಂಪತಿ ಕೊಲೆಯಲ್ಲಿ ಸೊಸೆಯೇ ಕಿಲ್ಲರ್

ಸೊಸೆಯೇ ಕಿಲ್ಲರ್
ಸೊಸೆಯೇ ಕಿಲ್ಲರ್
Published on

ಸೂಲಿಬೆಲೆ ಡಬಲ್ ಮರ್ಡರ್ ಪ್ರಕರಣಕ್ಕೆ ತಿರುವು

ಮೊಮ್ಮಕ್ಕಳ ಕೈಗೂ ಕೋಳ


ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನ ಸೂಲಿಬೆಲೆಯಲ್ಲಿ ಡಿ.9ರಂದು ನಡೆದಿದ್ದ ವೃದ್ಧ ದಂಪತಿ ಜೋಡಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಕ್ಕಳೊಂದಿಗೆ ಸೇರಿ ಸೊಸೆಯೇ ಕೊಲೆ ಮಾಡಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ವೃದ್ಧ ದಂಪತಿ ಮಗನೇ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ವೇಳೆ ಕೊಲೆ ಸಂದರ್ಭದಲ್ಲಿ ಮಗ ಸ್ಥಳದಲ್ಲೇ ಇರಲಿಲ್ಲ. ಅತ್ತೆ ಹಾಗೂ ಮಾವನನ್ನು ಸೊಸೆಯೇ ಕೊಲೆ ಮಾಡಿದ್ದು, ಕೊಲೆಗೆ ಮೊಮ್ಮಕ್ಕಳು ಸಹಕಾರ ನೀಡಿದ್ದರು ಎಂಬ ಸತ್ಯ ಬಯಲಾಗಿದೆ.
ಸೂಲಿಬೆಲೆಯ ವಾಲ್ಮಿಕಿ ನಗರದ ನಿವಾಸಿಗಳಾದ ರಾಮಕೃಷ್ಣಪ್ಪ(70) ಹಾಗೂ ಅವರ ಪತ್ನಿ ಮುನಿರತ್ನಮ್ಮ(65) ಕೊಲೆಯಾದ ದುರ್ದೈವಿಗಳು. ಸೊಸೆ ಭಾಗ್ಯಾ(39) ಪ್ರಮುಖ ಆರೋಪಿಯಾಗಿದ್ದು. ಮಗಳು ವರ್ಷಾ(30) ಹಾಗೂ ಅಪ್ರಾಪ್ತ ಮಗನನ್ನು ಬಂಧಿಸಲಾಗಿದೆ.
ಮಗನೂ ಅರೆಸ್ಟ್: ಕೊಲೆ ನಡೆದ ಸಂದರ್ಭದಲ್ಲಿ ದಂಪತಿ ನರಸಿಂಹಮೂರ್ತಿ (45) ಕೆಲಸದ ನಿಮಿತ್ತ ಕೆ.ಆರ್.ಪುರಂಗೆ ತೆರಳಿದ್ದ ಮನೆಗೆ ಮರಳಿದ ನಂತರ ಪತ್ನಿ ಹಾಗೂ ಮಕ್ಕಳ ವರ್ತನೆ ಕಂಡು ಅನುಮಾನಗೊಂಡು ಪ್ರಶ್ನಿಸಿದಾಗ ಕೊಲೆ ವಿಚಾರ ತಿಳಿದಿತ್ತು. ಕೊಲೆ ವಿಚಾರ ತಿಳಿದರೆ ಪತ್ನಿ ಹಾಗೂ ಮಕ್ಕಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಕೊಲೆ ವಿಚಾರ ಮುಚ್ಚಿಡುವ ಪ್ರಯತ್ನ ಮಾಡಿದ್ದ ಎನ್ನಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಈ ಬಗ್ಗೆ ನರಸಿಂಹಮೂರ್ತಿ ಬಾಯ್ಬಿಟ್ಟಿದ್ದು, ಕೊಲೆ ಪ್ರಕರಣ ಮುಚ್ಚಿಟ್ಟ ಆರೋಪದಡಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಸಾಲ ತೀರಿಸಲು ಕೊಲೆ: ಪತಿ ನರಸಿಂಹಮೂರ್ತಿ ಸಾಕಷ್ಟು ಸಾಲ ಮಾಡಿದ್ದು ಅದನ್ನು ತೀರಿಸಲು ಪತಿ ಪಾಲಿಗೆ ಬರಬೇಕಾದ ಆಸ್ತಿಯನ್ನು ಕೊಡಿ ಅದರಿಂದ ಸಾಲ ತೀರಿಸುತ್ತೇವೆ ಎಂದು ಆರೋಪಿ ಭಾಗ್ಯಾ ಮಾವನ ಬಳಿ ಸಾಕಷ್ಟು ಮನವಿ ಮಾಡಿದ್ದಳು. ಇದರಿಂದ ಕುಪಿತಗೊಂಡಿದ್ದ ಭಾಗ್ಯಾ ಮಾವನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು. ಪತಿ ಮನೆಯಲ್ಲಿಲ್ಲದ ಸಮಯ ನೋಡಿ ತನ್ನಿಬ್ಬರ ಮಕ್ಕಳ ಸಹಕಾರದಿಂದ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಳು ಎನ್ನಲಾಗಿದೆ.
ಮೃತನ ಹೆಸರಲ್ಲಿ ಆಸ್ತಿ: ಮೃತ ರಾಮಕೃಷ್ಣಪ್ಪ ಹೆಸರಿನಲ್ಲಿ 5 ನಿವೇಶನ ಹಾಗೂ 3 ಎಕರೆ ಜಮೀನು ಇತ್ತು. ದಂಪತಿಗೆ 4 ಹೆಣ್ಣು ಮಕ್ಕಳು ಹಾಗೂ ಒರ್ವ ಮಗನಿದ್ದು ಎಲ್ಲರಿಗೂ ಮದುವೆ ಮಾಡಿಕೊಡಲಾಗಿತ್ತು. ಪುತ್ರ ನರಸಿಂಹ ಮೂರ್ತಿ ೈನಾನ್ಸ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಕೋಟ್ಯಂತರ ರೂ. ಸಾಲಗಾರನಾಗಿದ್ದ.ಸಾಲ ತೀರಿಸಲು ತಂದೆ ಆಸ್ತಿಯಲ್ಲಿ ಪಾಲಿಗಾಗಿ ಆಗಾಗ ಜಗಳ ಮಾಡುತ್ತಿದ್ದ, ಇದಕ್ಕೆ ಪತ್ನಿ ಭಾಗ್ಯಾ ಸಹ ದುಂಬಾಲು ಬಿದ್ದಿದ್ದಳು ಎನ್ನಲಾಗಿದೆ. ಏತನ್ಮಧ್ಯೆ ರಾಮಕೃಷ್ಣಪ್ಪ ಪುತ್ರಿ ಒಂದು ನಿವೇನನದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಮಾನವ ಆಸ್ತಿ ಎಲ್ಲವೂ ಹೆಣ್ಣುಮಕ್ಕಳ ಪಾಲಾಗಲಿದೆ ಎಂದು ಆತಂಕಗೊಂಡ ಭಾಗ್ಯ ಕೊಲೆ ಸಂಚು ರೂಪಿಸಿದ್ದಳು.
ಬಾಯಿಗೆ ಬಟ್ಟೆ ತುರುಕಿದರು: ಮೊದಲು ಅತ್ತೆಯನ್ನು ಕೊಲೆ ಮಾಡಲು ಕಬ್ಬಿಣದ ರಾಡ್ ತಂದಿದ್ದ ಭಾಗ್ಯಾ ತಲೆಗೆ ಹೊಡೆದಾಗ ಅತ್ತೆ ಕಿರುಚದಂತೆ ಬಾಯಿಗೆ ಬಟ್ಟೆ ತಿರುಕುವಂತೆ ಮಕ್ಕಳಿಗೆ ಸೂಚನೆ ನೀಡಿದ್ದಳು. ಅದರಂತೆ ಅತ್ತೆಗೆ ಹೊಡೆದ ತಕ್ಷಣ ಮಕ್ಕಳು ಅಜ್ಜಿಯ ಬಾಯಿಗೆ ಬಟ್ಟೆ ತುರುಕಿದ್ದರು. ಕೆಲಹೊತ್ತಿನ ನಂತರ ಬಂದ ಮಾವನಿಗೂ ಥಳಿಸಿ ಇದೇ ತಂತ್ರ ಅನುಸರಿಸಿದ್ದರು. ಕೊಲೆ ಆರೋಪದಡಿ ಭಾಗ್ಯಾ, ಹಾಗೂ ಇಬ್ಬರು ಮಕ್ಕಳು ಸೇರಿ ಕೊಲೆ ಪ್ರಕರಣ ಮುಚ್ಚಿಟ್ಟ ಆರೋಪದಡಿ ಮಗ ನರಸಿಂಹಮೂರ್ತಿಯನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net