ಮಾರ್ಚ್​​​ 28ಕ್ಕೆ ಪಾಲಿಕೆ ಬಜೆಟ್ಮಂಡಿಸಲು ದಿನ ನಿಗದಿ

bbmp office
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025-26ನೇ ಸಾಲಿನ ಆಯವ್ಯಯ ಶುಕ್ರವಾರ (ಮಾ.28) ಮಂಡನೆಯಾಗಲಿದೆ. ಈ ಮೊದಲು ಗುರುವಾರ (ಮಾ.27) ದಿನ ನಿಗದಿಯಾಗಿತ್ತು. ಬಜೆಟ್‌ನಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಸೇರಿಸುವಂತೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಜೆಟ್ ದಿನ ಬದಲಾಗಿದೆ.

ಈ ಬಾರಿಯ ಆಯವ್ಯಯದಲ್ಲಿ ಬೃಹತ್ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ರಾಜ್ಯ ಸರ್ಕಾರದಿಂದ ದಾಖಲೆಯ 7 ಸಾವಿರ ಕೋಟಿ ರೂ. ನೆರವು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆಯ ಬಜೆಟ್ ಮೊದಲ ಬಾರಿ 20 ಸಾವಿರ ಕೋಟಿ ರೂ. ಸನಿಹಕ್ಕೆ ತಲುಪುವುದೆಂದು ನಿರೀಕ್ಷಿಸಲಾಗಿದೆ. ಕಳೆದ ವಾರ 15-16 ಸಾವಿರ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲು ಅಧಿಕಾರಿಗಳು ತಯಾರಿ ನಡೆಸಿದ್ದರು. ಆ ಬಳಿಕ ಡಿಸಿಎಂ ಸಭೆ ನಡೆಸಿ ನಗರ ಮೂಲಸೌಕರ್ಯ ಕಾಮಗಾರಿಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಅಧಿಕ ಹಣ ನಿಗದಿ ಮಾಡುವಂತೆ ಸೂಚಿಸಿದ ಕಾರಣ, ಆಯವ್ಯಯ 18-19 ಸಾವಿರ ಕೋಟಿ ರೂ.ಗೆ ಹಿಗ್ಗುವ ಸಾಧ್ಯತೆ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಆಯವ್ಯಯ ತಯಾರಿಗೆ ಅಂತಿಮ ಸ್ಪರ್ಶ:

ಬಿಬಿಎಂಪಿ ಬಜೆಟ್ ತಯಾರಿಸಲು 2 ತಿಂಗಳ ಹಿಂದೆಯೇ ಅಧಿಕಾರಿಗಳು ತಯಾರಿ ಆರಂಭಿಸಿದ್ದಾರೆ. ಹಿಂದಿನ ವರ್ಷದಂತೆ ಈ ಬಾರಿಯೂ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಪಾಲಿಕೆಯ ಹಣಕಾಸು ವಿಭಾಗದ ಮುಖ್ಯಸ್ಥರು ಆಯವ್ಯಯ ಮಂಡಿಸಲಿದ್ದಾರೆ. ಸಾರ್ವಜನಿಕರ ಸಲಹೆ ಅಲ್ಲದೆ ನಗರ ತಜ್ಞರಿಂದ ಕೆಲ ಅಂಶಗಳನ್ನು ಪಡೆದು ಅವುಗಳು ಅನುಷ್ಠಾನಯೋಗ್ಯವೇ ಎಂಬುದನ್ನು ಅಧಿಕಾರಿಗಳು ಚರ್ಚಿಸಿದ್ದಾರೆ. ಮುಖ್ಯ ಆಯುಕ್ತರು ಎಲ್ಲ ವಲಯಗಳಿಂದ ಸ್ಥಳೀಯ ಸೌಕರ್ಯಕ್ಕೆ ಬೇಕಾದ ಅನುದಾನದ ಮಾಹಿತಿಯನ್ನು ತರಿಸಿಕೊಂಡು ಪರಾಮರ್ಶೆ ನಡೆಸಿದ್ದರು. ಇದನ್ನು ಡಿಸಿಎಂ ಅವರ ಗಮನಕ್ಕೆ ತಂದಿದ್ದು, ಒಟ್ಟಾರೆ ಜನರಿಗೆ ಹೊರೆಯಾಗದ ರೀತಿ ಉತ್ತಮ ಬಜೆಟ್ ಮಂಡಿಸಲು ಸಲಹೆ ನೀಡಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಹತ್ತುಹಲವು ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಅಳವಡಿಸಿದ್ದು, ಅಂತಿಮ ಸ್ಪರ್ಶ ನೀಡುವಲ್ಲಿ ಮಗ್ನರಾಗಿದ್ದಾರೆ.

ಸಚಿವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ?:

ರಾಜ್ಯ ಸಂಪುಟದಲ್ಲಿ ನಗರ ಪ್ರತಿನಿಧಿಸುವ ಐವರು (ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್) ಸಚಿವರಿದ್ದಾರೆ. ಇವರೊಂದಿಗೆ ಡಿಸಿಎಂ ಈಗಾಗಲೇ ಚರ್ಚೆ ನಡೆಸಿ ಪಾಲಿಕೆಯಿಂದ ಯಾವ ಯಾವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬುದಾಗಿ ಸಲಹೆ ಪಡೆದಿದ್ದಾರೆ. ಈ ವೇಳೆ ಸಚಿವರು ತಮ್ಮ ಮತಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಡಿಸಿಎಂ ಸಮ್ಮತಿ ಸೂಚಿಸಿರುವುದರಿಂದ ಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅಧಿಕ ಅನುದಾನ ನಿಗದಿಯಾಗಲಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net