

ಹಿರಿಯೂರು: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆ ವಿಶ್ವ ಶ್ರೇಷ್ಠತೆ ಹೊಂದಿದ್ದು, ಜಾಗೃತಿ ಮೂಡಿಸುವಲ್ಲಿ ಬುಡಕಟ್ಟು ಸಂಸ್ಕೃತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಡಿಡಿ ಜಗದೀಶ್ ಹೆಬ್ಬಳ್ಳಿ ಹೇಳಿದರು.
ತಾಲೂಕಿನ ದೇವರಕೊಟ್ಟ ಮುರಾರ್ಜಿ ವಸತಿ ಶಾಲೆ ಕ್ಯಾಂಪಸ್ ನಲ್ಲಿ ಸೋಮವಾರ ಆಯೋಜಿಸಿದ್ದ ಏಕಲವ್ಯ ವಸತಿ ಶಾಲೆಗಳು ರಾಜ್ಯಮಟ್ಟದ ಸಾಂಸ್ಕೃತಿಕ-ಕಲಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾ ಹಂತದಲ್ಲಿ ಬುಡಕಟ್ಟು ಸಂಸ್ಕೃತಿ ಅನಾವರಣ, ಪರಂಪರೆ ಅರಿವು. ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಪೋಷಿಸುವ ಮತ್ತು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ದೇಶದ ಬುಡಕಟ್ಟು ಸಂಸ್ಕೃತಿ ಪರಿಚಯ, ಕಲೆ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ, ಧೈರ್ಯ, ನಂಬಿಕೆ, ಪ್ರೀತಿ, ಮಾನವೀಯ ಸಂಬಂಧಿಗಳನ್ನು ಗಟ್ಟಿಗೊಳಿಸಿ, ಬದುಕಿನ ಪಾಠ ಕಲಿಸುತ್ತದೆ ಎಂದರು.
ಯುವ ಸಮೂಹ ದೇಶದ ನಿಜವಾದ ಆಸ್ತಿ ಆಗಿದ್ದು, ಆತ್ಮ ವಿಶ್ವಾಸ ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬಹುದು, ಇಂತಹ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಭೆ ಅನಾವರಣ: ರಾಜ್ಯದ ವಿವಧ ಜಿಲ್ಲೆಗಳ 12 ಏಕಲವ್ಯ ವಸತಿ ಶಾಲೆಯ 800 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬುಡಕಟ್ಟು ಸಮುದಾಯದ ಸಂಸ್ಕೃತಿಯ ಸಮೂಹ ನೃತ್ಯ, ಕ್ಲಾಸಿಕಲ್ ಸಂಗೀತ, ನಾಟಕ, ದೇಶ ಭಕ್ತಿ ಗೀತೆ ಗಾಯನ, ಏಕಪಾತ್ರ ಅಭಿಯಾನ ಇತರ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು: ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಪೂರ್ಣ ಕುಂಭಹೊತ್ತು, ತಮಟೆ- ನೃತ್ಯದೊಂದಿಗೆ ಸಂಭ್ರಮಿಸಿದರು, ವೇಷ-ಭೂಷಣದೊಂದಿಗೆ ಗಮನ ಸೆಳೆದರು.
ಕಲಾ ಉತ್ಸವದಲ್ಲಿ ಭಾಗವಹಿಸಿದ್ದ 800 ವಿದ್ಯಾರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು, ಎರಡು ದಿನ ಬುಡಕಟ್ಟು ಸಂಸ್ಕೃತಿ-ಕಲಾ ಉತ್ಸವ ನಡೆಯಲಿದೆ.
ಕಾರ್ಯಕ್ರಮದ ಸಂಯೋಜಕ ಎಸ್.ಕೆ. ಮಹಾದೇವ್, ಜಿಲ್ಲಾ ಸಮನ್ವಯ ಅಧಿಕಾರಿ ಹರ್ಷ, ಪ್ರಾಚಾರ್ಯರಾದ ಪ್ರವೀಣ್, ಪ್ರಕಾಶ್, ರಮೇಶ್, ಹರ್ಷ, ಮಂಜುನಾಥ್ ರೆಡ್ಡಿ, ಹೊಯ್ಸಳ ಇತರರಿದ್ದರು.
ದೆಹಲಿಯ ಬುಡಕಟ್ಟು ಸಂಸ್ಕೃತಿ ಸಚಿವಾಲಯ-ಎಇಎಸ್‌ಟಿಎಸ್ ಸಂಸ್ಥೆಯ ಮಾರ್ಗದರ್ಶನ, ರಾಜ್ಯ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಏಕಲವ್ಯ ಶಾಲೆಗಳ ರಾಜ್ಯಮಟ್ಟದ ಬುಡಕಟ್ಟು ಸಂಸ್ಕೃತಿ-ಕಲಾ ಉತ್ಸವ ಆಯೋಜಿಸಲಾಗಿತ್ತು.
ಡೆಹ್ರಡೋನ್‌ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ: ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಡೆಹ್ರಡೂನ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ದೇಶದ 28 ರಾಜ್ಯ, ಕೇಂದ್ರಾಡಳಿತ ಪ್ರದೇಶದ ಏಕಲವ್ಯ-ಬುಡಕಟ್ಟು ವಸತಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.