ಕಸ ಬಿಸಾಡುವ ಸಂಸ್ಕೃತಿ ಬದಲಾಗಬೇಕು: ನವೀನ್ ಭಂಡಾರಿ ಕರೆ

Ism_culture
Published on

ಪುತ್ತೂರು ಗ್ರಾಮಾಂತರ: ಸ್ವಚ್ಛತೆಯಲ್ಲಿ ದ.ಕ. ಜಿಲ್ಲೆ ಮತ್ತು ಪುತ್ತೂರು ತಾಲೂಕು ರಾಜ್ಯಕ್ಕೆ ಮಾದರಿಯಾಗಬೇಕು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಕಸ ಬಿಸಾಡುವ ಸಂಸ್ಕೃತಿ ಬದಲಾಗಬೇಕು. ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ ಹೇಳಿದರು.

ಒಳಮೊಗ್ರು ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಬೃಹತ್ ಸ್ವಚ್ಛತಾ ಶ್ರಮದಾನ ಸಮಾರೋಪ ಸಮಾರಂಭ, ಸಹಕರಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, 10 ದಿನ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ತಮ್ಮ ಸ್ಥಾನಮಾನ ನೋಡದೆ ಪಂಚಾಯಿತಿಯೊಂದಿಗೆ ಕೈ ಜೋಡಿಸಿದ್ದಾರೆ. ನಮ್ಮ ಕಸಕ್ಕೆ ನಾವೇ ಜವಬ್ದಾರರು ಎಂಬುದನ್ನು ತಿಳಿದುಕೊಂಡರೆ ಸ್ವಚ್ಛ ಪರಿಸರವಾಗಲು ಸಾಧ್ಯವಿದೆ ಎಂದರು.

ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಕಸ ಬಿಸಾಡುವುದು ನಿಲ್ಲಬೇಕು ಎಂಬ ಮನಸ್ಥಿತಿ ನಮ್ಮಲ್ಲಿ ಸ್ವ-ಇಚ್ಛೆಯಿಂದ ಬೆಳೆದು ಬಂದರೆ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದರು.

ಸ್ಪಂದನಾ ಸೇವಾ ಬಳಗದ ಗೌರವ ಸಲಹೆಗಾರ ನಿತೀಶ್ ಕುಮಾರ್ ಶಾಂತಿವನ, ಅನುಗ್ರಹ ಸಂಜೀವಿನಿ ಒಕ್ಕೂಟ ಎಂಬಿಕೆ ಚಂದ್ರಿಕಾ, ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ, ಕುಂಬ್ರ ಕೆಐಸಿ ಬಶೀರ್ ಕೌಡಿಚ್ಚಾರ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿದರು. ಕಾರ್ಯದರ್ಶಿ ಜಯಂತಿ ವಂದಿಸಿದರು.

ಕಸದ ಬುಟ್ಟಿ ಅಳವಡಿಕೆ, ಕರಪತ್ರ ಹಂಚಿಕೆ

ಕುಂಬ್ರ ವರ್ತಕರ ಸಂಘ ಪಂಚಾಯಿತಿಗೆ ಕೊಡುಗೆಯಾಗಿ ನೀಡಿದ್ದ ಎರಡು ಕಸದ ಬುಟ್ಟಿಯನ್ನು ಕುಂಬ್ರ ಜಂಕ್ಷನ್‌ನಲ್ಲಿರುವ ಎರಡು ಬಸ್ ತಂಗುದಾಣಗಳಲ್ಲಿ ಅಳವಡಿಸಲಾಯಿತು. ಒಣ ಕಸ, ಹಸಿ ಕಸ ವಿಂಗಡಣೆ ಸೇರಿದಂತೆ ಸ್ವಚ್ಛತೆ ಬಗ್ಗೆ ಮಾಹಿತಿ ಹೊಂದಿರುವ ಕರಪತ್ರವನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ ಬಿಡುಗಡೆಗೊಳಿಸಿ ಪೇಟೆಯ ಅಂಗಡಿಗಳಿಗೆ ಹಂಚಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net