ತಾಪ ತಣಿಸಿಕೊಳ್ಳಲು ಕೆರೆಕಟ್ಟೆಗಳ ಮೊರೆ

15ark1
ಅರಕಲಗೂಡು ತಾಲೂಕಿನ ರಾಮನಾಥಪುರ ಕಾವೇರಿ ನದಿಯ ಗಾಯಿತ್ರಿ ಶಿಲೆ, ಗೋಗರ್ಭ ತಟದಲ್ಲಿ ನದಿಗಿಳಿದು ಈಜಾಡಿ ಬೇಸಿಗೆ ತಾಪ ತಣಿಸಿಕೊಳ್ಳುತ್ತಿರುವ ಜನರು.
Published on

ಅರಕಲಗೂಡು : ತಾಲೂಕಿನ ನದಿ ತಟದ ಹಳ್ಳಿಗಳ ಜನತೆ ಬೇಸಿಗೆ ಸುಡು ಬಿಸಿಲಿನ ಉರಿಗೆ ದೇಹದ ತಾಪ ತಣಿಸಿಕೊಳ್ಳುವ ಸಲುವಾಗಿ ಹೊಳೆಯಲ್ಲಿ ಸ್ನಾನ ಮಾಡಲು ಮುಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಹೇಮಾವತಿ ಹಾಗೂ ಕಾವೇರಿ ನದಿ ಹಾದು ಹೋಗಿರುವ ಸುತ್ತಲಿನ ಹಳ್ಳಿಗಳ ಜನರು ಸ್ನಾನ ಮಾಡಲು ಯೋಗ್ಯವಿರುವ ಸ್ಥಳ ಹುಡುಕಿಕೊಂಡು ಧಾವಿಸಿ ಬಿರು ಬೇಸಿಗೆ ತಾಪ ತಾಳಲಾರದೆ ತಣ್ಣೀರಿಗಿಳಿದು ಮೈತೊಳೆದು ದೇಹದ ಬಿಸಿ ತಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಕರು ಹೆಚ್ಚಾಗಿ ನದಿಗಿಳಿದು ಗಂಟೆಗಟ್ಟಲೆ ಈಜಾಡುತ್ತಾ ತಣ್ಣನೆಯ ಅನುಭವ ಪಡೆಯುತ್ತಿದ್ದಾರೆ.

ತಾಲೂಕಿನ ಕೊಣನೂರು, ಕೇರಳಾಪುರ, ಬಸವಾಪಟ್ಟಣ ಹಾಗೂ ರಾಮನಾಥಪುರದಲ್ಲಿ ಸ್ನಾನ ಮಾಡಲು ಯೋಗ್ಯವಾಗಿರುವ ನದಿ ತಟದ ಸ್ಥಳಗಳಲ್ಲಿ ಹೆಚ್ಚಿನ ಜನರು ನೀರಿನಲ್ಲಿ ಮುಳುಗೇಳುತ್ತಿದ್ದಾರೆ. ರಾಮನಾಥಪುರದ ಕಾವೇರಿ ನದಿಯಲ್ಲಿ ಎಲ್ಲೆಂದರಲ್ಲಿ ಸ್ನಾನ ಮಾಡಲು ಜನದಟ್ಟಣೆಯೇ ನೆರೆದಿದ್ದು ಯುವಕರ ಈಜಾಟದ ಕಲರವ ಕಂಡುಬರುತ್ತಿದೆ.

ದಕ್ಷಿಣ ಕಾಶಿ ಖ್ಯಾತಿಯ ರಾಮನಾಥಪುರದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಕೈಗೊಳ್ಳಲು ಬರುವ ಭಕ್ತರು ಪುಣ್ಯಸ್ನಾನಕ್ಕಾಗಿ ಕಾವೇರಿ ನದಿಗಿಳಿಯುವುದು ಸಾಮಾನ್ಯ, ಮಾರ್ಗಶಿರ ಮಾಸದಲ್ಲಿ ನಡೆಯುವ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಆದರೀಗ ದೇವಸ್ಥಾನಗಳಿಗೆ ಬರುವ ಭಕ್ತರಿಗಿಂತ ಮಿಗಿಲಾಗಿ ಸುಡು ಬಿಸಿಲಿನ ಅಬ್ಬರ ತಾಳಲಾರದೆ ಹೈರಾಣದ ಜನರು ಸ್ನಾನಕ್ಕಾಗಿ ಸುಕ್ಷೇತ್ರಕ್ಕೆ ಹೆಚ್ಚಿನದಾಗಿ ಎಡತಾಕುತ್ತಿದ್ದಾರೆ.

ಬೇಸಿಗೆ ಪರಿಣಾಮ ಜನರು ತಂಪು ಗಾಳಿಗೆ ಫ್ಯಾನ್‌ಗಳ ಮೊರೆ ಹೋಗಿದ್ದು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಗ್ರಾಮೀಣ ಪ್ರದೇಶದ ಕೃಷಿಕರು ಅನಿವಾರ್ಯವಾಗಿ ಬಿಸಿಲಿಗೆ ಮೈಯೊಡ್ಡಿ ದುಡಿಯುತ್ತಿದ್ದಾರೆ. ಮನೆಯಲ್ಲಿ ಕೂರದೇ ಕೆಲವರು ಮಧ್ಯಾಹ್ನದ ಹೊತ್ತಿಗೆ ನೇರವಾಗಿ ಹೊಳೆ ಹಾದಿ ಹಿಡಿಯುತ್ತಿದ್ದಾರೆ.

ಒಂದೆಡೆ ಬಿಸಿಲಿನ ತಾಪ ದಿನೆ ದಿನೆ ನೆತ್ತಿ ಸುಡುಲಾರಂಭಿಸಿದೆ. ಮತ್ತೊಂದೆಡೆ ಬರಗಾಲದ ಪರಿಣಾಮ ನದಿಯಲ್ಲಿ ನೀರಿನ ಮಟ್ಟ ಕೂಡ ತೀವ್ರ ತಗ್ಗಿದ್ದು ಇದರಿಂದ ಯುವಕರು ಎಲ್ಲೆಂದರಲ್ಲಿ ಹೊಳೆಗಿಳಿದು ಈಜಾಡಲು ಶುರು ಮಾಡಿದ್ದಾರೆ. ಮುಂಗಾರು ಮಳೆ ಸುರಿದು ಕಾವೇರಿ ಉಕ್ಕೇರುವ ತನಕ ನದಿಗಿಳಿದು ಈಜಾಡಿ ಸ್ನಾನ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ ಎನ್ನುತ್ತಾರೆ ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net