

ತಿ.ನರಸೀಪುರ: ಗೌತಮ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಸ್ಥಾನದ ಮೇರು ವ್ಯಕ್ತಿತ್ವ ಕುವೆಂಪು ಅವರದ್ದಾಗಿತ್ತು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಬನ್ನೂರು ಹೋಬಳಿಯ ಯಾಚೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 1.50 ಕೋಟಿ ರೂ. ವೆಚ್ಚದ ವಿಶ್ವ ಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಕಿರೀಟಪ್ರಾಯರಾಗಿದ್ದಾರೆ. ಇತಿಹಾಸ, ಪುರಾಣ, ಪುಣ್ಯಕತೆಗಳನ್ನು ಬಿಂಬಿಸಿದ ಈ ಮಹಾತ್ಮರ ಕಾವ್ಯಗಳು ಅಜರಾಮರ. ಜನರ ನಾಡಿಮಿಡಿತ ಅರಿತು ಅವರ ಹೃದಯ ಮುಟ್ಟುವಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದರು.
20ನೇ ಶತಮಾನದಲ್ಲಿ ಕುವೆಂಪು ಅವರು ಜನ್ಮ ತಳೆಯದಿದ್ದರೆ ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊರತೆಯಾಗುತ್ತಿತ್ತು ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ಜಗತ್ತಿನಲ್ಲಿ ಬದುಕಿಗಾಗಿ ಸಾಹಿತ್ಯ ಮತ್ತು ಸಾಹಿತ್ಯಕ್ಕಾಗಿ ಬದುಕು ಎಂಬ ಎರಡು ಮುಖಗಳನ್ನು ಕಾಣಬಹುದು. ಆದರೆ, ಕುವೆಂಪು ಅವರು ಬದುಕಿದಂತೆ ಬರೆದ ಮತ್ತು ಬರೆದಂತೆಯೇ ಬದುಕಿದವರಲ್ಲಿ ಅಗ್ರಗಣ್ಯರಾಗಿ ಕಂಡುಬರುತ್ತಾರೆ ಎಂದರು. 70ರ ದಶಕದಿಂದ ಈಚೆಗೆ ನಾವು ದಲಿತ ಪ್ರಜ್ಞೆಯನ್ನು ಕಾಣುತ್ತಾ ಬಂದಿದ್ದೇವೆ. ಸಾಮಾನ್ಯರ ದೃಷ್ಟಿಯಲ್ಲಿ ವ್ಯವಸ್ಥೆಯನ್ನು ಆಕ್ರೋಶಿಸುವ ಪಾತ್ರಗಳನ್ನು ಸೃಷ್ಟಿಸಿ, ಸಮಾಜವನ್ನು ಎಚ್ಚರಿಸಿದ್ದ ವೈಚಾರಿಕ ಪ್ರಜ್ಞೆ ಕೂಡ ಕುವೆಂಪು ಅವರದ್ದೇ ಆಗಿದೆ ಎಂದರು.
20ನೇ ಶತಮಾನದಲ್ಲಿ ಮಹಾಕಾವ್ಯ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕಳಶವನ್ನಿಟ್ಟ ಶ್ರೇಷ್ಠ ಕವಿ ಕುವೆಂಪು. ಪ್ರತಿಯೊಬ್ಬರೂ ಜಾತಿಯಿಂದ ಮುಖ್ಯರಾಗಬಾರದು. ಬದಲಾಗಿ ನೈತಿಕ ವ್ಯಕ್ತಿತ್ವದಿಂದ ಮುಖ್ಯರಾಗಬೇಕೆಂದರು. ಜಾತಿ ಸಂಕೋಲೆಯನ್ನು ಬಲವಾಗಿ ವಿರೋಧಿಸಿ ವಿಶ್ವಮಾನವ ಸಂದೇಶ ಸಾರಿದ ಮಹಾ ಮಾನವತಾವಾದಿ. ತಮ್ಮ ಜೀವಿತಾವಧಿವರೆಗೂ ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಿದ ಕುವೆಂಪು ಅವರು ಕನ್ನಡದ ಅನರ್ಘ್ಯ ರತ್ನರಾಗಿದ್ದರು ಎಂದು ಬಣ್ಣಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಚಿತಾಭಸ್ಮವನ್ನು 30 ವರ್ಷಗಳಿಂದ ಸಂರಕ್ಷಣೆ ಮಾಡಿ ಈಗ ಸ್ಮಾರಕ ಭವನ ನಿರ್ಮಿಸಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸರ್ಕಾರದಿಂದ ಭವನ ನಿರ್ಮಾಣಕ್ಕೆ ಬೇಕಾದ ಎಲ್ಲ ಸಹಾಯವನ್ನು ಕೊಡಿಸುತ್ತೇನೆ. ಕುವೆಂಪು ಅವರ ಹೆಸರಲ್ಲಿ ಒಳ್ಳೆಯ ಸ್ಮಾರಕ ನಿರ್ಮಾಣ ಮಾಡೋಣ ಎಂದು ಮಹದೇವಪ್ಪ ತಿಳಿಸಿದರು.
ರಾಮಕೃಷ್ಣ ಸೇವಾ ಕೇಂದ್ರದ ಕಾರ್ಯದರ್ಶಿ ಹಾಗೂ ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ ಮಾತನಾಡಿ, ಗ್ರಾಮದಲ್ಲಿ ನಿರ್ಮಿಸಲುದ್ದೇಶಿರುವ ಕುವೆಂಪು ಚಿತಾಭಸ್ಮ ಸ್ಮಾರಕ ಭವನದಲ್ಲಿ ವಿಚಾರ ಸಂಕಿರಣಗಳು, ಕೃಷಿ ಇಲಾಖೆಗೆ ಸಂಬಂಧಿಸಿದ ಚಟುವಟಿಕೆಗಳು, ರೈತರ ಸಮಸ್ಯೆಗಳ ಬಗ್ಗೆ ಉಪನ್ಯಾಸಗಳನ್ನು ಮಾಡುವ ವಿವಿಧೋದ್ದೇಶ ಹೊಂದಲಾಗಿದೆ. ಮುಖ್ಯವಾಗಿ ಇಲ್ಲಿ ಜಾತ್ಯತೀತವಾಗಿ ಸರಳ ವಿವಾಹವನ್ನು ಮಂತ್ರ ಮಾಂಗಲ್ಯದ ರೂಪದಲ್ಲಿ ಮಾಡಿಕೊಂಡು ಹೋಗಲು ಅವಕಾಶ ನೀಡಲು ಸಂಸ್ಥೆಯ ಸದಸ್ಯರು ಆಲೋಚನೆ ಮಾಡಿದ್ದಾರೆ. ಈ ಹಿಂದೆ ಹಳ್ಳಿಗಳಲ್ಲಿ ಮಂತ್ರ ಮಾಂಗಲ್ಯಗಳು ಹೇರಳವಾಗಿ ನಡೆಯುತ್ತಿದ್ದವು. ಕಾರಣಾಂತರಿಂದ ಈಗ ಕ್ಷೀಣವಾಗಿವೆ. ಈಗ ಅವು ಮತ್ತೆ ಚೇತನ ಪಡೆಯುವಂತಾಗಬೇಕು. ಮದುವೆ ಮಾಡುವ, ಮನೆಕಟ್ಟುವ ವಿಷಯದಲ್ಲಿ ರೈತ ಹಿಂಡಿ ಹಿಪ್ಪೆಯಾಗುತ್ತಿದ್ದಾನೆ. ಆರ್ಥಿಕ ಸಂಕಷ್ಟದಿಂದ ಮುಕ್ತಿ ಹೊಂದಲು ಮಂತ್ರ ಮಾಂಗಲ್ಯ ಹೇರಳವಾಗಿ ನಡೆಯಬೇಕಿದೆ ತಿಳಿಸಿದರು.
ಯಾಚೇನಹಳ್ಳಿ ರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾದಾನಂದನಾಥ ಸ್ವಾಮೀಜಿ, ಸಂಸದ ಸುನೀಲ್ ಬೋಸ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಮೈಮುಲ್ ನಿರ್ದೇಶಕ ಆರ್. ಚಲುವರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಮುನಾವರ್ ಪಾಷ, ವೀಣಾ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಕೃಷಿ ಸಹಾಯಕ ನಿರ್ದೇಶಕಿ ಸುಹಾಸಿನಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ರವಿಕುಮಾರ್, ಲಕ್ಷ್ಮೀನಾರಾಯಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಗ್ರಾ.ಪಂ. ಅಧ್ಯಕ್ಷ ವೈ.ಸಿ.ಶಿವಕುಮಾರ್, ಸದಸ್ಯ ವೈ.ಎಸ್.ಶೇಖರ್, ಸರೋಜಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಾಮಕೃಷ್ಣ ಸೇವಾ ಕೇಂದ್ರದ ಧರ್ಮದರ್ಶಿ ಡಾ.ಎಚ್.ಎಲ್.ನಾಗರಾಜ್, ಎಂ.ಸುಧೀರ್, ವೈ.ಕೆ.ಕ್ಯಾತೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.