ತಂಪಾದ ಇಳೆ ನಳನಳಿಸುತ್ತಿದೆ ಬೆಳೆ

1
Published on

ಚಿಕ್ಕನಾಯಕನಹಳ್ಳಿಯಲ್ಲಿ ಉತ್ತಮ ಮಳೆ | 31,500 ಹೆಕ್ಟೇರ್​ ಪ್ರದೇಶದಲ್ಲಿ ದಾಖಲೆಯ ಬಿತ್ತನೆ | ರಾಗಿ ಪೈರಿಗೆ ಹೊಸಕಳೆ ತಂದ ವರುಣ

ಕಿರಣ್​ ಹುಳಿಯಾರು
ಕಳೆದೊಂದು ವಾರದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸುರಿದ ಜಡಿಮಳೆಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಜೀವಕಳೆ ಬಂದಂತಾಗಿದ್ದು, ರಾಗಿ ಸಲು ಕೈ ತಪು$್ಪವ ಭೀತಿಯಲ್ಲಿದ್ದ ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದು, ಉತ್ತಮ ಸಲಿನ ನಿರೀಕ್ಷೆ ಹೆಚ್ಚಿಸಿದೆ.


ಹೌದು…! ಕಳೆದ ವರ್ಷ ತಾಲೂಕಿನಾದ್ಯಂತ ಬರಗಾಲ ಆವರಿಸಿ, ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ರಾಗಿ ಎರಡೂ ಕೈಕೊಟ್ಟಿದ್ದವು. ಈ ವರ್ಷವೂ ಮುಂಗಾರು ಪೂರ್ವದಲ್ಲಿ ಮಳೆ ಸುರಿದರೂ ಮಧ್ಯದಲ್ಲಿ ಕೈಕೊಟ್ಟ ಕಾರಣ ಹೆಸರು ಬಿತ್ತನೆಗೆ ಹಿನ್ನಡೆಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ರೈತರಲ್ಲಿ ಭರವಸೆ ಮೂಡಿಸಿತ್ತು. ಇದರಿಂದ 31,500 ಹೆಕ್ಟೇರ್​ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ದಿನಕಳೆದಂತೆ ಮಳೆಯಿಲ್ಲದೆ ಆತಂಕ ಮೂಡಿಸಿತ್ತು. ಸದ್ಯ ಜಡಿ ಮಳೆಗೆ ಬೆಳೆ ಹಚ್ಚ ಹಸಿರಾಗಿದ್ದು, ರೈತರ ಆತಂಕ ದೂರವಾಗಿದೆ.


ಒಣಗಲಾರಂಭಿಸಿದ ಬೆಳೆ: ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಬಿಸಿಲಿನ ತಾಪ ಏರಿ ಪೈರು ಒಣಗಲಾರಂಭಿಸಿ ಬೆಳೆ ಹಾನಿಯ ಭೀತಿ ಎದುರಾಗಿತ್ತು. ಕೊಳವೆ ಬಾವಿ ಇರುವ ರೈತರು ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ಬೆಳೆ ರಕ್ಷಣೆ ಮಾಡಿಕೊಂಡಿದ್ದರು. ಯಾವುದೇ ನೀರಿನ ವ್ಯವಸ್ಥೆಯಿಲ್ಲದ ರೈತರು ದೇವರ ಮೇಲೆ ಭಾರ ಹಾಕಿ ವರುಣನ ಆಗಮನಕ್ಕೆ ಕೈ ಮುಗಿದು ಪ್ರಾರ್ಥಿಸುತ್ತಿದ್ದರು. ಅನ್ನದಾತನ ಪ್ರಾರ್ಥನೆ ವರುಣನಿಗೆ ಕೇಳಿಸಿದ್ದು, ಕಳೆದೊಂದು ವಾರದಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ದಿನವಿಡೀ ಸುರಿದ ಜಡಿಮಳೆಗೆ ರಾಗಿ ಬೆಳೆಗೆ ಮರುಜೀವ ಬಂದಿದೆ.


ಉತ್ತಮ ಇಳುವರಿ ನಿರೀಕ್ಷೆ: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಜೂನ್​ನಲ್ಲಿ 107.9 ಮಿ.ಮೀ., ಜುಲೈನಲ್ಲಿ 116.4 ಮಿ.ಮೀ., ಆಗಸ್ಟ್​ನಲ್ಲಿ 232 ಮಿ.ಮೀ. ಮಳೆಬಿದ್ದಿತ್ತು. ಆದರೆ, ಸೆಪ್ಟೆಂಬರ್​ನಲ್ಲಿ ವಾಡಿಕೆ ಮಳೆ 160 ಮಿಮೀ. ಇದ್ದರೂ 37.4 ಮಿಮೀ ಮಾತ್ರ ಮಳೆಯಾಗಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಅಕ್ಟೋಬರ್​ ಆರಂಭದ 15ದಿನಗಳಲ್ಲೇ 79.9 ಮಿ.ಮೀ. ಮಳೆ ಬಿದ್ದು ರೈತನ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಮೊದಲು ಬಿತ್ತಿದ ರಾಗಿ ಈಗಾಗಲೇ ತೆನೆ ಒಡೆದಿದೆ. ತಡವಾಗಿ ಬಿತ್ತಿದ್ದ ರಾಗಿ ಇನ್ನೇನು ಕೆಲ ದಿನಗಳಲ್ಲಿ ತೆನೆಯೊಡೆಯಲಿದೆ. ಮುಂದಿನ ದಿನಗಳಲ್ಲಿ ಒಂದೆರಡು ಉತ್ತಮ ಮಳೆಯಾದರೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಅಲ್ಲದೆ ರಾಗಿ ಹುಲ್ಲು ಕೂಡ ಚೆನ್ನಾಗಿ ಬೆಳೆದು ದನಕರುಗಳ ಮೇವಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆಯಾಶ್ರಿತ ರಾಗಿ ಬೆಳೆಗಾರರೇ ಹೆಚ್ಚಾಗಿದ್ದಾರೆ. ಮಳೆ ನಂಬಿ ಬಿತ್ತಿದ್ದ ರಾಗಿ ತೆನೆ ಮೂಡುವ ಹಂತದಲ್ಲಿದ್ದಾಗ ಮಳೆ ಇಲ್ಲದೆ ರೈತರು ಮುಗಿಲು ನೋಡುವಂತಾಗಿತ್ತು. ಸಾಲ ಮಾಡಿಕೊಂಡಿದ್ದ ರೈತರು ಚಿಂತಾಕ್ರಾಂತರಾಗಿದ್ದರು. ಈಗ ಸುರಿದ ಮಳೆಯಿಂದ ರಾಗಿ, ತೊಗರಿ, ಸಾಮೆ, ಹುರುಳಿ ಬೆಳೆಗೆ ಹೆಚ್ಚು ಅನುಕೂಲವಾಗಿದೆ. ಇನ್ನೊಂದೆರಡು ಮಳೆ ಬಿದ್ದರೆ ಈ ವರ್ಷ ತಾಲೂಕಿನಲ್ಲಿ ದಾಖಲೆಯ ಇಳುವರಿ ಬರುವ ಸಾಧ್ಯತೆ ಇದೆ.| ಕರಿಯಣ್ಣ ತಾಲೂಕು ಅಧ್ಯಕ್ಷ, ರೈತ ಸಂಘ ತಾಲೂಕಿನಲ್ಲಿ ಈ ವರ್ಷ 31.500 ಹೆಕ್ಟೇರ್​ ರಾಗಿ, 480 ಹೆಕ್ಟೇರ್​ ತೊಗರಿ, 420 ಹೆಕ್ಟೇರ್​ ಅವರೆ, 720 ಹೆಕ್ಟೇರ್​ ಅಲಸಂದೆ ಬಿತ್ತಲಾಗಿತ್ತು. ಆದರೆ, ಕಳೆದ ತಿಂಗಳು ಮಳೆ ಇಲ್ಲದೆ ಬೆಳೆ ಬಾಡುತ್ತಿತ್ತು. ಈಗ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಎಕರೆಗೆ 6 ಕ್ವಿಂಟಾಲ್​ ರಾಗಿ ಇಳುವರಿ ನಿರೀೆ ಇದೆ. ಹತ್ತರಿಂದ ಹದಿನೈದು ದಿನಕ್ಕೊಮ್ಮೆ ಮಳೆ ಬಂದರೆ 6 ಕ್ವಿಂಟಾಲ್​ಗಿಂತಲೂ ಹೆಚ್ಚು ಇಳುವರಿ ಸಾಧ್ಯ. ಸಾಮೆ, ತೊಗರಿ, ಅವರೆಗೂ ಅನುಕೂಲವಾಗಲಿದೆ. ಹೂವು ಕಟ್ಟುವ ಹಂತದಲ್ಲಿ ಕೀಟ ಬಾಧೆ ಬಂದರೆ ಇಲಾಖೆ ಸಂಪರ್ಕಿಸಿದರೆ ಔಷಧ ವಿತರಿಸಲಾಗುವುದು.| ಶಿವರಾಜ್​ಕುಮಾರ್​, ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net