ಕೈ ಕೊಟ್ಟ ಮಳೆ, ಒಣಗುತ್ತಿದೆ ಬೆಳೆ

raagi
ಮಳೆ ಇಲ್ಲದೆ ಬಾಡಿರುವ ರಾಗಿ ಹೊಲ
Published on

ಜಿಲ್ಲೆಯ ನಾಲ್ಕೂ ತಾಲೂಕಿನಲ್ಲೂ ರಾಗಿ ಬೆಳೆದ ರೈತರಿಗೆ ಆತಂಕ

ಬೆಳೆ ಸಮೀಕ್ಷೆಗೆ ಚಿಂತನೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ ಮೂರು ವಾರಗಳಿಂದ ಮಳೆಯ ಸುಳಿವಿಲ್ಲದೆ ಗ್ರಾಮಾಂತರ ಜಿಲ್ಲೆಯ ಪ್ರಧಾನ ಬೆಳೆ ರಾಗಿಗೆ ಸಂಕಷ್ಟ ಎದುರಾಗಿದೆ. ಕೈ ಕೊಟ್ಟ ಮಳೆಯಿಂದಾಗಿ ಬೆಳೆ ಒಣಗಲಾರಂಭಿಸಿದ್ದು ರಾಗಿ ಬೆಳೆಗಾರರು ಆತಂಕಗೊಂಡಿದ್ದಾರೆ.
ಪ್ರಸಕ್ತ ಸಾಲಿನ ಅರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತಾಪಿ ಜನರು ಭೂಮಿ ಹದಗೊಳಿಸಿ ರಾಗಿ ಬಿತ್ತನೆ ಆರಂಭಿಸಿದ್ದರು. ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದರಿಂದ ಉತ್ತಮ ಸಲು ಪಡೆಯುವ ಕಸನು ಕಂಡಿದ್ದರು. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯೂ ಅಗತ್ಯ ರಸಗೊಬ್ಬರ ದಾಸ್ತಾನು, ಬಿತ್ತನೆ ಬೀಜ ಪೂರೈಕೆ ಮಾಡಿತ್ತು, ಜಿಲ್ಲೆಯ ನಾಲ್ಕೂ ತಾಲೂಕುಗಳನ್ನೊಳಗೊಂಡಂತೆ 69960 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ರಾಗಿ ಬಿತ್ತನೆಯಾಗಿತ್ತು.
ಜಿಲ್ಲೆಯಲ್ಲಿ ಜುಲೈ ಮಧ್ಯಾಂತರದ ಬಳಿಕ ಬಿತ್ತನೆ ಕಾರ್ಯ ಆರಂಭವಾಗಿತ್ತು, ಆಗಸ್ಟ್ ಅಂತ್ಯದೊಳಗೆ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಇದರಲ್ಲಿ ಜಿಲ್ಲೆಯ ಪ್ರಮುಖ ಬೆಳೆ ರಾಗಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ನಂತರದಲ್ಲಿ ಮುಸುಕಿನ ಜೋಳ, ತೊಗರಿ ಹಾಗೂ ನೆಲಗಡಲೆ ಬಿತ್ತನೆಯಾಗಿತ್ತು.
4 ತಾಲೂಕುಗಳಲ್ಲೂ ಇದೇ ಪರಿಸ್ಥಿತಿ:
ಪ್ರತಿ ವರ್ಷ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕೆಲವು ತಾಲೂಕುಗಳಲ್ಲಿ ಉತ್ತಮ ಮಳೆ, ಇನ್ನಿತರ ತಾಲೂಕಿನಲ್ಲಿ ಮಳೆ ಕೊರತೆಯಂತ ಸನ್ನಿವೇಶ ಕಂಡುಬರುತ್ತಿತ್ತು. ದುರಾದೃಷ್ಟವಶಾತ್ ಈ ಬಾರಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ಕೊಳವೆಬಾವಿ ಆಶ್ರಿತ ಜಮೀನುಗಳನ್ನು ಹೊರತುಪಡಿಸಿ ಮಳೆಯಾಶ್ರಿತ ಜಮೀನುಗಳಲ್ಲಿನ ರಾಗಿ ಬೆಳೆ ಪರಿಸ್ಥಿತಿ ಶೋಚನೀಯವಾಗಿದ್ದು ಮಳೆರಾಯ ಮುನಿಸು ತೊರೆಯದಿದ್ದರೆ ರಾಗಿ ಬೆಳೆಗೆ ಸಂಕಷ್ಟ ಎದುರಾಗಲಿದೆ ಎಂಬ ಆತಂಕ ಮೂಡಿದೆ.
ಬೆಳೆ ಸಮೀಕ್ಷೆಗೆ ಚಿಂತನೆ:
ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯೂ ಕಾದು ನೋಡುತ್ತಿದೆ, ಇನ್ನೆರಡು ವಾರದೊಳಗೆ ಮಳೆಯಾಗದಿದ್ದರೆ ಬೆಳೆ ಸಮೀಕ್ಷೆ ನಡೆಸಲು ಚಿಂತನೆ ನಡೆಸಿದೆ. ಈಗಾಗಲೇ ಆಯಾ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇನ್ನೆರಡು ವಾರದ ಬಳಿಕ ಬೆಳೆ ಸಮೀಕ್ಷೆಗೆ ಸಂಬಂಧಪಟ್ಟಂತೆ ತಯಾರಿ ನಡೆಸುವಂತೆ ಜಿಲ್ಲಾ ಕೃಷಿ ಇಲಾಖೆ ತಿಳಿಸಿದೆ.
ತೇವಾಂಶ ಕಾಪಾಡುತ್ತಿದೆ: ಜಿಲ್ಲೆಯ ಕೆಲವು ಭಾಗಗಳಲ್ಲಿ ಆಗಾಗ ತುಂತುರು ಮಳೆಯಾಗುತ್ತಿದ್ದು ತೇವಾಂಶದಿಂದಾಗಿ ರಾಗಿ ಬೆಳೆ ಉಸಿರಾಡುತ್ತಿದೆ. ಇನ್ನು ಕೆಲವು ಭಾಗಗಳಲ್ಲಿ ಮಳೆಯ ಸುಳಿವೇ ಇಲ್ಲದೆ ರಾಗಿ ೈರು ಒಣಗಲಾರಂಭಿಸಿದೆ. ಕೆಲವು ರೈತರು ಅಕ್ಕಪಕ್ಕದ ಕೊಳವೆಬಾವಿ ಇರುವ ರೈತರಿಂದ ನೀರಿನ ಸಂಪರ್ಕ ಪಡೆದು ಬೆಳೆ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಇನ್ನು ಕೆಲವರು ಟ್ಯಾಂಕರ್ ನೀರಿನ ಮೊರೆ ಹೋಗಲು ಚಿಂತಿಸಿದ್ದಾರೆ.

ಈ ವೇಳೆಗಾಗಲೇ ಮಳೆಯಾಗಬೇಕಿತ್ತು, ಇನ್ನೆರಡು ವಾರದೊಳಗೆ ಮಳೆಯಾದರೆ ರಾಗಿ ಬೆಳೆಗೆ ಯಾವುದೇ ತೊಂದರೆಯಾಗುವುದಿಲ್ಲ. ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ರಾಗಿ ಬೆಳೆ ಒಣಗುವ ಹಂತಕ್ಕೆ ಬಂದಿಲ್ಲ. ಕೆಲವು ಕಡೆ ತುಂತುರು ಮಳೆಯಿಂದಾಗಿ ತೇವಾಂಶಕ್ಕೆ ಕೊರತೆಯಾಗಿಲ್ಲ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ಇನ್ನೆರಡು ವಾರ ಕಾದು ನೋಡಿ ಬಳಿಕ ಬೆಳೆ ಸಮೀಕ್ಷೆ ನಡೆಸುವ ಕಾರ್ಯಕ್ಕೆ ಚಾಲನೆ ಕೊಡಲು ಚಿಂತಿಸಲಾಗಿದೆ.
ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net