ಸರ್ಕಾರಿ ಕಾರ್ಯಕ್ರಮದಲ್ಲಿ ಕೇಂದ್ರದ ಟೀಕೆ ತರವಲ್ಲ

arun
Published on

ಶಿವಮೊಗ್ಗ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಮುಂದೆ ರಾಜಕೀಯ ಮಾತನಾಡಲಿ. ಆದರೆ ಸರ್ಕಾರಿ ಕಾರ್ಯಕ್ರಮಗಳಲ್ಲೂ ಕೇಂದ್ರ ಸರ್ಕಾರವನ್ನು ಟೀಕಿಸುವುದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಕಿಡಿಕಾರಿದರು.

ಮಂಗಳವಾರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ, ಜಿಎಸ್‌ಟಿ, ಜಿಡಿಪಿ ಬಗ್ಗೆ ಕಾರ್ಮಿಕರ ಸಭೆಯಲ್ಲಿ ಲಾಡ್ ಮಾತನಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಹೀಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು ತಪ್ಪು ಎಂದರು.

ಸಿದ್ಲೀಪುರದಲ್ಲಿ ಕಾರ್ಮಿಕರ ವಸತಿ ಸಮುಚ್ಚಯವನ್ನು ಲಾಡ್ ಉದ್ಘಾಟಿಸಿದರು. ಆದರೆ ಅದಕ್ಕೆ ಅನುದಾನ ನೀಡಿ ನಿರ್ಮಾಣ ಮಾಡಿದ್ದು ಬಿಜೆಪಿ ಸರ್ಕಾರ. ಹಾಗೆಂದು ನಾವು ರಾಜಕೀಯ ಮಾತನಾಡಬಹುದೆ? ಕಾರ್ಮಿಕ ಸಮಸ್ಯೆಗಳ ಬಗ್ಗೆ, ಅವರಿಗೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾತನಾಡಬೇಕಾದ ಕಾರ್ಮಿಕ ಸಚಿವರು ಭಾಷಣದ ಬಹುಪಾಲು ಸಮಯವನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಮೀಸಲಿಟ್ಟಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಾಡ್‌ಗೂ ಮುನ್ನ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರ ಹಿತರಕ್ಷಣೆಗೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದರು. ಸಚಿವರಾಗಿ ಲಾಡ್ ಕೈಗೊಂಡ ತೀರ್ಮಾನಗಳನ್ನು ಶ್ಲಾಘಿಸಿದರು. ಇಂತಹ ಔದಾರ್ಯ ಸಚಿವರ ಕಡೆಯಿಂದಲೂ ಬರಬೇಕಿತ್ತು. ಸಾರ್ವಜನಿಕವಾಗಿ ನಡೆದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಲಾಡ್ ನಡೆದುಕೊಂಡ ರೀತಿಯನ್ನು ಗಮನಿಸಿದ ನಾವೆಲ್ಲರೂ ಭದ್ರಾವತಿಯ ಕಾರ್ಯಕ್ರಮದಿಂದ ದೂರ ಉಳಿದೆವು ಎಂದು ಅರುಣ್ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಮಾಲತೇಶ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net