

ಚಿಕ್ಕೋಡಿ: ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ. ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ನಿವಾಸಿ ವಾಶಪ್ಪ ರಾಮಪ್ಪ ನೇರ್ಲೆ (26)ಶಿಕ್ಷೆಗೊಳಗಾದ ಅಪರಾಧಿ.
2020ರಲ್ಲಿ ಬಾಲಕಿಯನ್ನು ಪುಸಲಾಯಿಸಿದ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಪೊಲೀಸ್ ಠಾಣೆ ತನಿಖಾಧಿಕಾರಿ ಆರ್.ಆರ್ ಪಾಟೀಲ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದಿಂದ 4 ಲಕ್ಷ ರೂ. ಪರಿಹಾರ ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.