

ಶಿಗ್ಗಾಂವಿ: ಪಾರಂಪರಿಕ ಜ್ಞಾನ ಸಂಪತ್ತಿನ ನಿರ್ಮಾತೃಗಳು ಜನಪದರುಗಳೇ ಆಗಿದ್ದಾರೆ. ಶತಮಾನದುದ್ದಕ್ಕೂ ಜೀವನಾನುಭವದ ಹಿನ್ನೆಲೆಯಲ್ಲಿ ಅವುಗಳ ರಕ್ಷಣೆ ಮತ್ತು ಪ್ರಯೋಗಶೀಲತೆಯನ್ನು ಆಗುಮಾಡಿಕೊಂಡು ಆ ಮೂಲಕ ಸಂಸ್ಕೃತಿಯನ್ನು ಬಿಂಬಿಸುತ್ತ ಬಂದಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.
ತಾಲೂಕಿನ ಕುನ್ನೂರು ಹಾಗೂ ಅಡವಿಸೋಮಾಪುರ ಗ್ರಾಮಗಳಲ್ಲಿ ವಿಶ್ವವಿದ್ಯಾಲಯದ ಗ್ರಾಮ ಕರ್ನಾಟಕ ಜಾನಪದ ಬಯಲು ವಸ್ತು ಸಂಗ್ರಹಾಲಯಕ್ಕೆ ಭಾನುವಾರ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗ್ರಾಮಸ್ಥರು ನೀಡಿದ ವಸ್ತುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಜೀವನ ಶೈಲಿಯನ್ನು ರೂಪಿಸುತ್ತ ಬಂದಿರುವ ಪರಿಕರ ಸಾಮಗ್ರಿಗಳನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧ್ಯಯನ, ಅಧ್ಯಾಪನ ಪಠ್ಯವನ್ನಾಗಿ ಸ್ವೀಕರಿಸಿಕೊಂಡು ಕ್ಷೇತ್ರ ಕಾರ್ಯಕ್ಕೆ ಮುಂದಾಗಿದೆ. ಗ್ರಾಮೀಣ ಪ್ರದೇಶದ ಜನ ಅದಕ್ಕೆ ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕುನ್ನೂರ ಗ್ರಾಮದ ಸೋಮಯ್ಯ ಹಿರೇಮಠ, ಬಿ.ಎಸ್. ಹಿರೇಮಠ, ಸುರೇಶಗೌಡ ಪಾಟೀಲ, ಕೆ.ಸಿ. ಪೊಲೀಸಪಾಟೀಲ, ಗದಿಗೆಮ್ಮ ಪೊಲೀಸ ಪಾಟೀಲ, ಅಡವಿಸೋಮಪುರದ ವೀರಭದ್ರಪ್ಪ ಕರೆಪ್ಪನವರ, ಮಹದೇವಪ್ಪ ದುಂಡಪ್ಪನವರ ಅವರು ವಿವಿಧ ಸಾಮಗ್ರಿಗಳನ್ನು ನೀಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ, ಶಿವಾನಂದ ದೊಡ್ಡಮನಿ, ಕಿರಿಯ ಸಹಾಯಕ ಶರೀಫ ಮಾಕಪ್ಪನವರ, ಪ್ರವೀಣ ಕರೆಪ್ಪನವರ, ಗ್ರಾಮದ ನಾಗರಾಜ ನಡಗೇರಿ, ಜೈಲಾನಿ ಮತ್ತೇಖಾನ ಇತರರಿದ್ದರು.