ಸಿಎಂ, ಕಾಂಗ್ರೆಸ್ ಸರ್ಕಾರಕ್ಕೆ ಗೋ ಶಾಪ ತಟ್ಟಲಿದೆ

ex minister k.s.eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಗಳ ಅಲಕ್ಷೃ ಮಾಡುವ ಜತೆಗೆ ಗೋ ಹಂತಕರಿಗೆ ನೇರವಾಗಿ ಬೆಂಬಲ ಕೊಡುತ್ತಿದೆ. ಇತ್ತೀಚಿನ ಸಚಿವ ಸಂಪುಟದ ನಿರ್ಧಾರ ಗೋ ಹತ್ಯೆಗೆ ಕುಮ್ಮಕ್ಕು ನೀಡಿದಂತಾಗಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಇಡೀ ಸರ್ಕಾರಕ್ಕೆ ಗೋವುಗಳ ಶಾಪ ತಟ್ಟಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಮೇಲೆ ಹಲ್ಲೆ ಮಾಡಿದ್ದು ರಾಕ್ಷಸಿ ಕೃತ್ಯ. ಆರೋಪಿ ಸೈಯದ್ ನಸ್ರು ಹಿಂದೆ ಯಾವುದೋ ದುಷ್ಕೃತ್ಯ ಅಡಗಿದೆ. ರಾಷ್ಟ್ರದ್ರೋಹಿ ತಂಡವೇ ಕೃತ್ಯದ ಹಿಂದಿರುವ ಶಂಕೆ ವ್ಯಕ್ತವಾಗಿದ್ದು ಮತಾಂಧರು, ರಾಷ್ಟ್ರದ್ರೋಹಿಗಳನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಆರೋಪಿ ಸೈಯದ್ ನಸ್ರು ಕುಡಿದು ಹಲ್ಲೆ ಮಾಡಿದ್ದಾನೆ. ಹುಚ್ಚನೆಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಈ ಸರ್ಕಾರ ಮತ್ತು ಪೊಲೀಸ್ ಇಲಾಖೆ ಗೋ ಹಂತಕರ ಪರವಾಗಿ ತಲೆ ಬಾಗಿವೆ. ಆರೋಪಿ ಮದ್ಯವ್ಯಸನಿ, ಹುಚ್ಚನೆಂದು ಸುಳ್ಳು ಹೇಳಿರುವುದು ಪೊಲೀಸ್ ಇಲಾಖೆಗೆ ಅವಮಾನ. ಸರ್ಕಾರ ಹೇಳಿದಂತೆ ಕುಣಿಯುತ್ತಿರುವ ಖಾಕಿ ಪಡೆ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಗೋವುಗಳ ಪಾಪಕ್ಕೆ ರಾಜ್ಯ ಸರ್ಕಾರ ಉಳಿಯುವುದಿಲ್ಲ. ಪೊಲೀಸ್ ಇಲಾಖೆಯ ಕುಟುಂಬಸ್ಥರೂ ಆ ನೋವನ್ನು ಅನುಭವಿಸುವರು ಎಂದು ಎಚ್ಚರಿಕೆ ನೀಡಿದರು.

ಆರೋಪಿ ಸೈಯದ್ ನಸ್ರು ಬಿಗಿ ಮಾಡಿದರೆ ಎಲ್ಲ ಸತ್ಯಾಂಶ ಹೊರಬರಲಿದೆ. ಈ ಸರ್ಕಾರಕ್ಕೆ ನಿಜವಾಗಿಯೂ ಗೋ ಮಾತೆ ಬಗ್ಗೆ ಗೌರವವಿದ್ದರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಷ್ಟ್ರಭಕ್ತರ ಬಳಗದ ಪಮುಖರಾದ ಮಹಾಲಿಂಗ ಶಾಸ್ತ್ರಿ, ಇ.ವಿಶ್ವಾಸ್, ಎಸ್.ಜಿ.ಬಾಲು, ಜಾಧವ್, ಶಿವಾಜಿ, ಮಣಿ, ಚಂದಾನಾಯ್ಕ, ರಾಜು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net