

ವಿಜಯಪುರ: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಶಿಫಾರಸ್ಸಿನ ಮೇರೆಗೆ ಎಸ್‌ಐಟಿ ರಚಿಸಿದ್ದಾಗಿ ಹೇಳುವ ಸರ್ಕಾರ ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳಾದಾಗ, ಹಾವೇರಿಯಲ್ಲಿ ಅಲ್ಪಸಂಖ್ಯಾತ ಮಹಿಳೆ ಮೇಲೆ ಅತ್ಯಾಚಾರ ನಡೆದಾಗ ಏಕೆ ಸುಮ್ಮನಿತ್ತು? ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಿ.ಮಂಜುಳಾ ತಕರಾರು ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ಕಂಡು ಬಂದಾಗ ಬಿಜೆಪಿ ಎಂದಿಗೂ ಸುಮ್ಮನಿಲ್ಲ. ಸೌಜನ್ಯ ಪ್ರಕರಣದಲ್ಲೂ ಬಿಜೆಪಿ ವಾಸ್ತವದ ಪರವಾಗಿದೆ. ಎಸ್‌ಐಟಿ ರಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾದಿಯಾಗಿ ಸರ್ವರೂ ಸ್ವಾಗತಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಯಾರ ಪರವಾಗಲಿ ಅಥವಾ ವಿರುದ್ಧವಾಗಲಿ ಇಲ್ಲ. ಸತ್ಯ ಹೊರಬರಬೇಕೆಂಬುದಷ್ಟೇ ನಮ್ಮ ಆಶಯ. ಆದರೆ, ಪ್ರಕರಣವನ್ನಿಟ್ಟುಕೊಂಡು ಯಾವುದೋ ‘ಇಸಂ’ಗೆ ಪ್ರೇರಣೆ ನೀಡಬಾರದೆಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಹಾವೇರಿಯಲ್ಲಿ ಒಂದು ವರ್ಷದ ಹಿಂದೆ ಅಲ್ಪಸಂಖ್ಯಾತ ಮಹಿಳೆ ಮೇಲೆ ಅತ್ಯಾಚಾರ ನಡೆಯಿತು. ಆಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಹೋರಾಟ ನಡೆಸಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲು ಹೇಳಿದಾಗ ಸಿಎಂ ಸಿದ್ಧರಾಮಯ್ಯ ಮಾಡಲಿಲ್ಲ. ಆಗ ಈ ಮಹಿಳಾ ಆಯೋಗ ಎಲ್ಲಿ ಹೋಗಿತ್ತು? ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳಾದಾಗ ಸ್ವಯಂ ಪ್ರೇರಿತವಾಗಿ ಏಕೆ ದೂರು ದಾಖಲಿಸಿಕೊಳ್ಳಲಿಲ್ಲ? ಅಜೆಂಡಾ ಫಿಕ್ಸ್ ಮಾಡಿ ಶಿಫಾರಸ್ಸು ಮಾಡುವ ಪ್ರಕರಣದಲ್ಲಿ ತೋರುವ ಕ್ರೀಯಾಶೀಲತೆಯನ್ನು ಜನಸಾಮಾನ್ಯರ ಪ್ರಕರಣದಲ್ಲಿ ಏಕೆ ತೋರುವುದಿಲ್ಲವೆಂದರು.
ಪ್ರಜ್ವಲ್ ರೇವಣ್ಣಗೆ ಕೋರ್ಟ್ ಶೀಕ್ಷೆ ವಿಧಿಸಿ ಪ್ರಕಟಿಸಿದ ತೀರ್ಪಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಂಜುಳಾ ಅವರು, ನ್ಯಾಯಾಲಯದ ತೀರ್ಪಿಗೆ ತಲೆಬಾಗಲೇಬೇಕು. ಜನಪ್ರತಿನಿಧಿಗಳಾಗಿ ಈ ರೀತಿಯ ನಡುವಳಿಕೆ ಖಂಡನೀಯ. ಇದನ್ನು ಸಹಿಸಲು ಅಸಾಧ್ಯ. ಹಿಂದೆ-ಮುಂದೆ ಮಾಡುವಂಥದ್ದು ಏನಿಲ್ಲ. ನಾವು ಸಾರ್ವಜನಿಕರ ಜೀವನದಲ್ಲಿ ಬರಬೇಕಾದರೆ ಸಚ್ಚಾರಿತ್ರೃ ತುಂಬ ಮುಖ್ಯ ಎಂದರು.
ಇನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲಿನ ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ, ಅದೊಂದು ದುರುದ್ಧೇಶ ಪೂರಿತ ಪ್ರಕರಣ. ಯಡಿಯೂರಪ್ಪ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹೀಗಾಗಿ ಆ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ ಎಂದರು.