ಶುಕ್ರವಾರ ಸ್ಮಾರ್ಟ್ ಪಾರ್ಕಿಂಗ್ ಉದ್ಘಾಟನೆ; ಫ್ರೀಡಂಪಾರ್ಕ್ ಬಹುಮಹಡಿಯಲ್ಲಿ ವಾಹನ ನಿಲ್ದಾಣ

New Project
Published on

ಬೆಂಗಳೂರು: ಬಿಎಂಪಿ ಖಾಸಗಿ ಸಹಭಾಗಿತ್ವದಲ್ಲಿ ಫ್ರೀಡಂಪಾರ್ಕ್ ಪ್ರತಿಭಟನಾ ಸಭಾಂಗಣ ಕಟ್ಟಡದಲ್ಲಿ ನಿರ್ಮಾಣ ಮಾಡಿರುವ ದೇಶದ ಮೊದಲ ಸ್ಮಾರ್ಟ್ ಪಾರ್ಕಿಂಗ್ ಸೆಂಟರ್ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ.

ಈ ಹಿಂದೆ ನಿಗದಿಗೊಳಿಸಿದ್ದಂತೆ ಜೂ.20 ಗುರುವಾರ ಲೋಕಾರ್ಪಣೆಗೊಳ್ಳಬೇಕಿತ್ತು. ಆದರೆ ಕಾರಣಾಂತರದಿಂದ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹತ್ವಾಕಾಂಕ್ಷಿ ಕೇಂದ್ರವನ್ನು ಉದ್ಘಾಟನೆಗೊಳಿಸಲಿದ್ದು, ಬೆಂಗಳೂರು ಉಸ್ತುವಾರಿಯೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮೆಜೆಸ್ಟಿಕ್, ಮಾರ್ಕೆಟ್,ವಿಧಾನಸೌಧ ಸುತ್ತಮುತ್ತಲ ಪ್ರದೇಶದ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಈ ಪಾರ್ಕಿಂಗ್ ಸೆಂಟರ್ ಪರಿಹಾರವಾಗಿದ್ದು, ದೇಶದ ಮೊದಲ ಸ್ಮಾರ್ಟ್ ಪಾರ್ಕಿಂಗ್ ಹಾಗೂ ಬ್ರಾಂಡ್ ಬೆಂಗಳೂರು ಯೋಜನೆಯ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಈ ಪಾರ್ಕಿಂಗ್ ಸೆಂಟರ್ ಹೊಂದಿದೆ. ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ ಸಂಸ್ಥೆಯು ಇಲ್ಲಿನ ಪಾರ್ಕಿಂಗ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. 

ದೇಶದಲ್ಲಿ ಇದೇ ಮೊದಲ ಬಾರಿಗೆ ಪಾರ್ಕಿಂಗ್ ಕೇಂದ್ರವೊಂದು ಾಸ್ಟ್‌ಟ್ಯಾಗ್ ಮೂಲಕ ಹಣಪಾವತಿಗೆ ವ್ಯವಸ್ಥೆ ಕಲ್ಪಿಸಿದೆ. ವಾಹನಗಳ ಆಗಮನ, ನಿರ್ಗಮನ, ಅವಧಿ, ಹಣ ಪಾವತಿ, ಸರಿಯಾದ ನಿಲುಗಡೆ, ಅಪಾಯದ ಮುನ್ಸೂಚನೆ, ಮಹಿಳೆಯರಿಗೆ ಭದ್ರತಾ ವ್ಯವಸ್ಥೆ, ಅಂಗವಿಕಲರಿಗೆ ಆದ್ಯತೆ ಹೀಗೆ ಪ್ರತಿಯೊಂದನ್ನು ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಲಾಗಿದೆ. ಸುಮಾರು 600 ಕಾರು ಹಾಗೂ 750 ಬೈಕ್‌ಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net