

ತರೀಕೆರೆ: ರಾಷ್ಟ್ರಾಭಿಮಾನವಿದ್ದರೆ ಮಾತ್ರ ದೇಶದ ಜತೆ ವೈಯಕ್ತಿಕ ಅಭ್ಯುದಯವೂ ಸಾಧ್ಯ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ನೂತನ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಮತ್ತು ಮಹಾತ್ಮ ಗಾಂಧಿ ಜಯಂತಿ ಆಚರಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಅಹಿಂಸೆ ಮಾರ್ಗದ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಈ ಮೂಲಕ ಜಗತ್ತಿಗೆ ಶಾಂತಿ ಮಂತ್ರ ಸಾರಿದ್ದಾರೆ. ಅವರು ಹಾಕಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದರು.
ಮಹಾನೀಯರ ಶ್ರಮದ ಫಲದಿಂದ ಆರ್‌ಎಸ್‌ಎಸ್ ಶತಮಾನದ ಸಂಭ್ರಮ ಕಂಡಿದೆ. ದೇಶಭಕ್ತಿ ಮೂಡಿಸುವ ಜತೆ ಸರ್ವರನ್ನೂ ಜಾಗೃತಗೊಳಿಸುವುದೇ ಸಂಘದ ಮೂಲ ಧ್ಯೇಯವಾಗಿದ್ದು, ನಾವೆಲ್ಲರೂ ಸಂಘದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಶಿಸ್ತುಬದ್ಧ ಜೀವನ ರೂಪಿಸಿ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಬಲದಿಂದ ಬಹುಮತ ಸಾಧಿಸಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಇದೇ ರೀತಿಯ ಫಲಿತಾಂಶ ನಿರೀಕ್ಷಿಸಲಾಗಿದೆ. ವಿವಿಧ ಘಟಕದ ಪ್ರಮುಖರು ಮತ್ತು ಕಾರ್ಯಕರ್ತರು ಪಕ್ಷ ಬಲವರ್ಧನೆಗೆ ಒತ್ತು ನೀಡಬೇಕಲ್ಲದೆ, ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿ ಪ್ರತಾಪ್, ನಗರ ಘಟಕ ಅಧ್ಯಕ್ಷ ಎಚ್.ಬಿ.ರೇಣುಕಪ್ಪ, ಪ್ರಮುಖರಾದ ಜಿ.ಎಸ್.ವಸಂತ್‌ಕುಮಾರ್, ರಾಜೇಶ್ವರಿ, ಪಿ.ಶಶಿಕುಮಾರ್ ಮತ್ತಿತರರಿದ್ದರು.