

ವಿಜಯಪುರ: ತತ್ವ ಪದಕಾರರು ಹಾಗೂ ಪ್ರವಚನಕಾರರಿಂದಲೇ ನಾಡಿನ ಸಂಸ್ಕೃತಿ ಶ್ರೀಮಂತವಾಗಿದೆ ಎಂದು ಬಿಎಲ್ಡಿಇ ಸಂಸ್ಥೆಯ ಸಮ ಕುಲಾಧಿಪತಿ ಡಾ.ವೈ ಎಂ. ಜೈಯರಾಜ್ ಹೇಳಿದರು.
ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ, ಕನ್ನಡ ವಿಭಾಗ, ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ತತ್ವಪದಕಾರ್ತಿಯರ ಲೋಕ ದೃಷ್ಟಿ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ನಿತ್ಯ ಭಜನೆ ಪದಗಳನ್ನು ಹಾಡಲಾಗುತ್ತದೆ. ಆ ಎಲ್ಲ ಭಜನೆ ಪದಗಳು ತತ್ವಪದಗಳನ್ನೇ ಹೊಂದಿವೆ. ಈ ಭಜನಾ ಮಂಡಳಿಗಳು ಹಳ್ಳಿಗಳಲ್ಲಿ ಇಂದಿಗೂ ತತ್ವಪದಗಳನ್ನು ಜೀವಂತವಾಗಿರಿಸಿವೆ ಎಂದರು.
ಮನುಷ್ವ ಮಾತ್ರವಲ್ಲ; ಗಿಡಮರಗಳು ಸಹ ಸಂವಹನ ನಡೆಸುತ್ತವೆ ಎಂಬುದನ್ನು ಸಂಶೋಧನೆಯಿಂದ ತಿಳಿದುಕೊಂಡಿದ್ದೇವೆ. ಆ ಸಂವಹನಕ್ಕೆ ಭಾಷೆ ಅತೀ ಮುಖ್ಯ. ಅಕ್ಷರ ಜ್ಞಾನವಿಲ್ಲದ ನಮ್ಮ ಜಾನಪದರು ತತ್ವಪದಗಳು, ಒಗಟು ಸೇರಿದಂತೆ ವಿವಿಧ ಸಾಹಿತ್ಯವನ್ನು ನಮಗೆ ಜ್ಞಾನವನ್ನಾಗಿ ಧಾರೆಯೆರಿದ್ದಾರೆ. ವಚನ ಸಾಹಿತ್ಯ ಜನಸಾಮಾನ್ಯರು ತಲುಪುವ ಸಾಹಿತ್ಯ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಸಲುವಾಗಿ ಶರಣರು ವಚನ ಸಾಹಿತ್ಯವನ್ನು ರಚಿಸಿದರು. ಅಂತಹ ಅಪರೂಪದ ವಚನ ಸಾಹಿತ್ಯವನ್ನು ಉಳಿಸಿ ಜಗತ್ತಿಗೆ ಪರಿಚಯಿಸುವಲ್ಲಿ ಡಾ.ಫ.ಗು. ಹಳಕಟ್ಟಿ ಅವರ ಶ್ರಮವನ್ನು ಮರೆಯುವಂತಿಲ್ಲ ಎಂದರು.
ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರದ ಸದಸ್ಯ ಡಾ.ದಸ್ತಗೀರ ಸಾಬ್ ದಿನ್ನಿ ಮಾತನಾಡಿ, ಸಂತಕವಿ ಕನಕದಾಸ ಮತ್ತು ತತ್ವಪದಗಳ ಅಧ್ಯಯನ ಕೇಂದ್ರದಲ್ಲಿ ಪುಸ್ತಕ ಪ್ರಕಟಣೆ, ಮಾರಾಟ ನಿರಂತರವಾಗಿ ನಡೆಯುತ್ತಿವೆ. ತತ್ವಪದಗಳ ದಾಖಲೀಕರಣ ನಡೆಯಬೇಕು, ತತ್ವಪದಕಾರ್ತಿಯರು ಬಹಳಷ್ಟು ಕಡಿಮೆ ಇದ್ದಾರೆ. ನಾವು ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಜೀವನದ ಮೌಲ್ಯಗಳನ್ನು ಹುಡುಕಿ ಕೊಟ್ಟಿರುವ ತತ್ವಪದಕಾರ್ತಿಯರನ್ನು ಹುಡುಕುವ ಕೆಲಸವನ್ನು ನಮ್ಮ ಅಧ್ಯಯನ ಕೇಂದ್ರ ಮಾಡಲಿದೆ ಎಂದರು.
ಡಾ.ಗರುಲಿಂಗಪ್ಪ ದಬಾಲೆ, ಡಾ.ಸಂಗಮನಾಥ ಲೋಕಾಪುರ ಹಾಗೂ ಡಾ.ಗೌರಮ್ಮ ಎಸ್.ಎಂ ಅವರು ತಮ್ಮ ವಿಚಾರ ಮಂಡಿಸಿದರು.
ಆಡಳಿತಾಧಿಕಾರಿ ಪ್ರೊ.ವಿ.ಎಸ್. ಬಗಲಿ, ಪ್ರಾಚಾರ್ಯೆ ಡಾ.ಆರ್.ಎಂ. ಮಿರ್ಧೆ, ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್. ಪಾಟೀಲ, ಡಾ.ಶ್ರೀನಿವಾಸ್ ದೊಡಮನಿ, ಡಾ.ಉಷಾದೇವಿ ಹಿರೇಮಠ, ಡಾ.ಆರ್.ಜಿ. ಕಮತರ, ಪ್ರೊ.ಎಸ್.ವೈ. ಅಂಗಡಿ ಮತ್ತಿತರರಿದ್ದರು. ಡಾ. ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ಡಾ.ಪಿ.ಎಸ್. ಪಾಟೀಲ ವಂದಿಸಿದರು.