ಸುಸ್ಥಿರ ಇಂಧನ ಕ್ಷೇತ್ರಕ್ಕೆ ದೇಶದ ಕೊಡುಗೆ ಅನುಪಮ

sustainable energy sector
Published on

ಶಿರಸಿ: ಇಂಧನ ಕ್ಷೇತ್ರದಲ್ಲಿ ಸಂಪೂರ್ಣ ಪರಾವಲಂಬಿ ಆಗಿದ್ದೇವೆ. ಜೈವಿಕ ಇಂಧನ ಜಾಗೃತಿ ಮಾಡಿಕೊಳ್ಳದೇ ಹೋದರೆ ಅಪಾಯ ಕಾದಿದೆ ಎಂದು ಜೈವಿಕ ಇಂಧನ ತಜ್ಞ ವೈ.ಬಿ. ರಾಮಕೃಷ್ಣ ಹೇಳಿದರು.

ನಗರದ ಕದಂಬ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕದಂಬ ಮಾರ್ಕೆಟಿಂಗ್, ನೆಲಸಿರಿ, ವೃಕ್ಷ ಲಕ್ಷ ಆಂದೋಲನ ಜಂಟಿಯಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

130 ವರ್ಷದ ಹಿಂದೆಯೇ ಬಯೋಗ್ಯಾಸ್ ಬಳಕೆ ಆರಂಭವಾಗಿತ್ತು. ಜೈವಿಕ ಇಂಧನ ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯ ಅವರು ಎಥೆನಾಲ್ ಮಿಕ್ಸ್ ಮಾಡುವ ಕಾರ್ಯ ಮಾಡಿದ್ದರು. ಪ್ರಪಂಚದಲ್ಲಿ ಯಾರೂ ಚಿಂತನೆ ಮಾಡಲಾಗದ ಸಂದರ್ಭದಲ್ಲಿ ಭಾರತದಲ್ಲಿ ಜೈವಿಕ ಇಂಧನದ ಕುರಿತು ಪ್ರಯೋಗ ನಡೆದಿದ್ದವು. ಸುಸ್ಥಿರ ಇಂಧನ ಕ್ಷೇತ್ರಕ್ಕೆ ನಮ್ಮ ದೇಶದ ಕೊಡುಗೆ ಅನನ್ಯ, ಅನುಪಮ ಎಂದರು.

ಹಿರಿಯ ಹೆಸ್ಕಾಂ ಅಧಿಕಾರಿ ದೀಪಕ ಕಾಮತ್, ಡಿಎಫ್​ಒ ಡಾ. ಅಜ್ಜಯ್ಯ ಜೆ. ಆರ್., ಕದಂಬದ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ, ನಾರಾಯಣ ಗಡಿಕೈ, ಉಷಾ ಹೆಗಡೆ, ವೆಂಕಟೇಶ ನಾಯ್ಕ ಇತರರು ಇದ್ದರು. ಅನಂತ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಕೋಟೆಮನೆ ಸ್ವಾಗತಿಸಿದರು. ವಿಕಾಸ ಹೆಗಡೆ ನಿರ್ವಹಿಸಿದರು.

ಸಾವಯವ ಕೃಷಿ ಸಾಧಕ ಪ್ರಶಸ್ತಿ ಪ್ರದಾನ: ಇಲ್ಲಿನ ಸಾವಯವ ಒಕ್ಕೂಟದಿಂದ ಇದೇ ಪ್ರಥಮ ಬಾರಿಗೆ ಆರಂಭಿಸಲಾದ ಸಾವಯವ ಕೃಷಿ ಸಾಧಕ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು. ಸಾವಯವ ಕೃಷಿ ಸಾಧಕ, ನಾಲ್ಕು ಕ್ವಿಂಟಾಲ್​ಗೂ ಅಧಿಕ ಏಲಕ್ಕಿ ಬೆಳೆ ತೆಗೆದ ಜೊಯಿಡಾದ ರವೀಂದ್ರ ಸಾಂಬಾ ಭಟ್, ಅಂಬೊಡೆ ಪಣಸೋಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವೀಂದ್ರ ಭಟ್ಟ ಅವರು ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ಸಾವಯವ ಉತ್ಪನ್ನಗಳನ್ನು ಸಾವಯವ ಒಕ್ಕೂಟಕ್ಕೆ ಮಾರಾಟ ಮಾಡಿದ್ದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net