

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ವೈವಾಹಿಕ ಬದುಕು, ಸಾಮಾಜಿಕ ಬದುಕಿನ ಕರ್ತವ್ಯಗಳನ್ನು ಮರೆತು ಶೋಕಿ ಬದುಕಿನತ್ತ ಆಕರ್ಷಿತರಾದ ಫಲವಾಗಿ ಇಂದು ರಾಷ್ಟ್ರದ ಆಧಾರ ಸ್ತಂಭಗಳಾದ ಮನೆಗಳು ದುರ್ಬಲವಾಗುತ್ತಿವೆ. ಎಲ್ಲ ಕಡೆಗಳಲ್ಲಿ ಮರೆಯಾಗುತ್ತಿರುವ ಸಂಸ್ಕಾರಗಳನ್ನು ಶಿಶು ಮಂದಿರದಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು. ಶನಿವಾರ ಇಳಂತಿಲದ ಶ್ರೀ ಕೇಶವ ಶಿಶು ಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಟ್ಟಡ ಸಮಿತಿಯ ಅಧ್ಯಕ್ಷ ಜನಾದರ್ನ ಗೌಡ ಅಣ್ಣಾಜೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘ ಚಾಲಕ್ ವಿನಯಚಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಿವಾನಂದ, ಇಳಂತಿಲ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಗೌಡ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್, ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಪಲ್ಲದಕೋಡಿ ಕೇಶವ ಭಟ್, ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಭಟ್ ಮೂಡಾಜೆ, ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಯತೀಶ್ ಬಂಗೇರ ಉಪಸ್ಥಿತರಿದ್ದರು.
ಶಿಶು ಮಂದಿರದ ಕಾರ್ಯದರ್ಶಿ ರವೀಂದ್ರ ಆಚಾರ್ಯ ಸ್ವಾಗತಿಸಿ ಸುಂದರಶೆಟ್ಟಿ ಎಂಜಿರಪಳಿಕೆ ವಂದಿಸಿದರು. ಪುಷ್ಪಲತಾ ತಿಲಕ್ ನಿರೂಪಿಸಿದರು. ಶಿಶು ಮಂದಿರದ ಮಾತಾಜಿಗಳಾದ ರೇವತಿ ಹಾಗೂ ಶಕುಂತಲಾ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.