ಕಾಂಗ್ರೆಸ್ಸಿಗರಿಂದ ದೇಶಕ್ಕೆ ಅಪಾಯ ಕಾದಿದೆ

CTD MP GOVINDA KARAJOLA-----3
Published on

ಚಿತ್ರದುರ್ಗ: ಕೇಂದ್ರದ ಸ್ವಾಯತ್ತ ಸಂಸ್ಥೆಗಳ ವಿರುದ್ಧ ಬೇಜವ್ದಾರಿಯಿಂದ ಮಾತನಾಡುತ್ತಿರುವ ಕಾಂಗ್ರೆಸ್ಸಿಗರಿಂದ ದೇಶಕ್ಕೆ ಅಪಾಯ ಕಾದಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ಸೇತರ ಆಡಳಿತ ಸಹಿಸಲಾಗದ ಕಾಂಗ್ರೆಸ್ ನಾಯಕರು ಪದೇ ಪದೆ ಇಡಿ, ಸಿಬಿಐ, ಚುನಾವಣಾ ಆಯೋಗಗಳಂಥ ಸಂಸ್ಥೆಗಳ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ನ್ಯಾಯಾಂಗ ವ್ಯವಸ್ಥೆಯನ್ನು ಇವರು ಶಂಕಿಸುವ ಕಾಲ ದೂರವಿಲ್ಲ ಎಂದಿದ್ದಾರೆ.

ಮತಗಳ್ಳತನದ ಆರೋಪ ಮಾಡಿರುವ ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ, ಪ್ರಚಾರಕ್ಕಾಗಿ ಹಾದಿಬೀದಿಯಲ್ಲಿ ಮಾತನಾಡುವುದು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಶೋಭೆ ತರದು. ನೋಟಿಸ್ ಕೊಡುವ ಹಕ್ಕು ಆಯೋಗಕ್ಕಿದೆ. ಚುನಾವಣಾ ಆಯೋಗ, ಕೋರ್ಟ್‌ಗಳ ಮೇಲೆ ನಂಬಿಕೆ, ವಿಶ್ವಾಸ ಮುಖ್ಯ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಭಾರತವನ್ನು ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ಮಾಡಿದ್ದು, ಬಲಿಷ್ಠ ಪ್ರಜಾಪ್ರಭುತ್ವವನ್ನು ನೀಡಿದೆ.

ಆಯೋಗದ ವಿರುದ್ಧ ಮಾತನಾಡುತ್ತಾ ಜನರನ್ನು ದಂಗೆ ಏಳಲು ಪ್ರಚೋದಿಸುತ್ತಿರುವ ರಾಹುಲ್‌ಗಾಂಧಿ ನಡೆ ಖಂಡನೀಯ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರ ಚುನಾವಣೆಯಲ್ಲಿ ಸೋತಿದ್ದಾಗ ಫಲಿತಾಂಶ ಧಿಕ್ಕರಿಸಿ, ಮೋಸ ನಡೆದಿದೆ ಎಂದು ಅಪಪ್ರಚಾರ ಮಾಡಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 136 ಕ್ಷೇತ್ರಗಳಲ್ಲಿ ಗೆದ್ದಾಗ ಯಾಕೆ ಆಯೋಗದ ಮೇಲೆ ಅನುಮಾನ ಪಡಲಿಲ್ಲ? ಕಾಂಗ್ರೆಸ್ ಗೆದ್ದರೆ ಆಯೋಗ, ಚುನಾವಣೆ ವ್ಯವಸ್ಥೆ ಸರಿಯಿದೆ. ಮತ ಯಂತ್ರಗಳು ಸರಿ ಇದ್ದಾವೆ. ಇಲ್ಲವಾದಲ್ಲಿ ಮೋಸ ನಡೆದಿದೆ ಎಂಬ ಸುಳ್ಳು ಆರೋಪಗಳಿಂದ ನೀವು ನಾಯಕರಾಗಲು ಸಾಧ್ಯವಿಲ್ಲವೆಂದು ರಾಹುಲ್‌ಗಾಂಧಿ ಅವರನ್ನು ಎಚ್ಚರಿಸಿದ್ದಾರೆ.

ಮತಗಳ್ಳತನ ಆರೋಪ ಸಮರ್ಥಿಸಲಿಲ್ಲವೆಂದು ದಲಿತ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿ ರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್‌ಗಾಂಧಿ ಅವರಿಂದ ದಲಿತರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ರಾಜಣ್ಣ ಅವರ ಬೆಂಬಲಕ್ಕೆ ನಿಲ್ಲಬೇಕು ಹಾಗೂ ಕಾಂಗ್ರೆಸ್ ನೀತಿಯನ್ನು ಖಂಡಿಸಬೇಕು ಎಂದು ರಾಜ್ಯದ ಜನರನ್ನು ಸಂಸದರು ಹೇಳಿಕೆಯಲ್ಲಿ ಕೋರಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net